ನವದೆಹಲಿ: ದೇಶದ ಕೃಷಿ ಚಟುವಟಿಕೆಗಳ ಜೀವನಾಡಿ, ಆರ್ಥಿಕತೆಯ ಬೆನ್ನಲುಬವಾಗಿರುವ ಮುಂಗಾರು ಮಾರುತಗಳು ಈ ವರ್ಷ ಜೂನ್‌ 6 ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ. ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ 5 ದಿನ ವಿಳಂಬವಾಗಿ ಮೊದಲ ಮುಂಗಾರು ಮಳೆ ಸುರಿಯಲಿದೆ ಎಂದು ಅದು ಹೇಳಿದೆ. ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈಮೆಟ್‌ ಸೋಮವಾರ ಬಿಡುಗಡೆ ಮಾಡಿದ್ದ ತನ್ನ ವರದಿಯಲ್ಲಿ ಜೂನ್‌ 4ರಂದು ಮುಂಗಾರು ಮಳೆ ಕೇರಳ ಪ್ರವೇಶಿಸಲಿದೆ ಎಂದು ಹೇಳಿದೆ. ಹೀಗಾಗಿ ಎರಡೂ ಸಂಸ್ಥೆಗಳು ಮುಂಗಾರು ಮಾರುತಗಳು ಈ ಬಾರಿ ವಿಳಂಬವಾಗಿಯೇ ಆಗಮನವಾಗಲಿದೆ ಎಂಬುದನ್ನು ಖಚಿತಪಡಿಸಿವೆ.

ಸಾಂಖಿಕ ಮಾದರಿ ಮುನ್ಸೂಚನೆ ಅನ್ವಯ, ನೈಋುತ್ಯ ಮುಂಗಾರು, ಅಂಡಮಾನ್‌ ಸಮುದ್ರದ ದಕ್ಷಿಣ ಭಾಗ, ನಿಕೋಬಾರ್‌ ದ್ವೀಪಕ್ಕೆ ಮೇ 18-19ರ ವೇಳೆಗೆ ಪ್ರವೇಶ ಮಾಡಲು ಅಗತ್ಯವಾದ ವಾತಾವರಣ ರೂಪುಗೊಂಡಿದೆ. ಹೀಗಾಗಿ ಜೂನ್‌ 6ರವರೆಗೆ ಮುಂಗಾರು ಮಳೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ಸಾಂಖಿಕ ಮಾದರಿಯ ಲೋಪವನ್ನು ಪರಿಗಣಿಸಿದರೆ ಮುಂಗಾರು ಮಾರುತ ಪ್ರವೇಶದ ದಿನದಲ್ಲಿ 4 ದಿನ ಹೆಚ್ಚು ಕಡಿಮೆ ಆಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಒಂದು ವೇಳೆ ಮುಂಗಾರು ಮಾರುತ ಪ್ರವೇಶ ಮುನ್ಸೂಚನೆಯಂತೆ ವಿಳಂಬವಾಗಿದ್ದೇ ಆದಲ್ಲಿ, 2014ರ ನಂತರ ಇಂಥ 4ನೇ ಘಟನೆಯಾಗಲಿದೆ. ಈ ಹಿಂದೆ 2014ರಲ್ಲಿ ಜೂ.5ರಂದು, 2015ರಲ್ಲಿ ಜೂ.6ರಂದು ಮತ್ತು 2016ರಲ್ಲಿ ಜೂನ್‌ 8ರಂದು ಮುಂಗಾರು ಪ್ರವೇಶವಾಗಿತ್ತು. ಇದೇ ವೇಳೆ ವಿಳಂಬ ಪ್ರವೇಶವು, ಮಳೆ ಪ್ರಮಾಣ ಕಡಿತವಾಗುತ್ತದೆ ಎಂಬುದರ ಸೂಚಕವನೇನೂ ಅಲ್ಲ. ಕಾರಣ, ಕಳೆದ ವರ್ಷ ಸಾಮಾನ್ಯಕ್ಕಿಂತ 3 ದಿನ ಮೊದಲೇ ಮುಂಗಾರು ಬಂದಿದ್ದರು, ದೇಶವು ಸಾಮಾನ್ಯ ಸರಾಸರಿಗಿಂತ ಕಡಿಮೆ ಮಳೆ ದಾಖಲಿಸಿತ್ತು. ಇನ್ನು 2017ರಲ್ಲಿ ಮೇ 30ಕ್ಕೆ ಮುಂಗಾರು ಆಗಮನವಾಗಿದ್ದರೂ, ದೀರ್ಘಕಾಲೀನ ಸರಾಸರಿಯ ಶೇ.95ರಷ್ಟುಮಳೆ ಸುರಿದಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

ಸ್ಕೈಮೆಟ್‌ ನೀಡಿದ್ದ ಮುನ್ಸೂಚನೆ ಅನ್ವಯ, ದಕ್ಷಿಣ ಪರಾರ‍ಯಯ ದ್ವೀಪದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ.95ರಷ್ಟುಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಶೇ.92ರಷ್ಟುಮಳೆಯಾಗಲಿದೆ ಎಂದು ಹೇಳಿದೆ. ಇನ್ನು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಲಿದ್ದರೆ, ಕರ್ನಾಟಕದ ಉತ್ತರ ಒಳಭಾಗದಲ್ಲಿ ಮಳೆ ಕೊರತೆಯಾಗಲಿದೆ. ಅದೇ ರೀತಿ ವಿದರ್ಭ, ಮರಾಠವಾಡ, ಪಶ್ಚಿಮ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಹೇಳಲಾಗಿತ್ತು.