Asianet Suvarna News Asianet Suvarna News

ಕೇರಳದಲ್ಲಿ ‘ಮುಂಗಾರಾಗಮನ’

  • ಕೇರಳ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಆರಂಭ
  • ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ಘೋಷಣೆ 
Monsoon hits Kerala announces Skymet

ನವದೆಹಲಿ: ಕೇರಳದಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ಘೋಷಿಸಿದೆ. ಈ ಮೂಲಕ ಭಾರತದಲ್ಲಿ ಮಳೆಗಾಲ ಆರಂಭವಾಗಿರುವ ಸೂಚನೆಯನ್ನು ಕೊಟ್ಟಿದೆ.

ಆದರೆ ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಆರಂಭವಾಗಿರುವ ಬಗ್ಗೆ ದೃಢಪಡಿಸಿಲ್ಲ, ಮುಂದಿನ 24 ಗಂಟೆಗಳಲ್ಲಿ [ಮಂಗಳವಾರ] ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆಯೆಂದು ಹೇಳಿದೆ.

2018ರ ನೈಋತ್ಯ ಮಾನ್ಸೂನ್‌ಗೆ ಕಾಯುವಿಕೆ ಕೊನೆಗೂ ಮುಗಿಯಿತು. ಸೋಮವಾರದ ಮಳೆಯ ಲಕ್ಷಣಗಳು, ಮಾನ್ಸೂನ್ ಆರಂಭವಾಗಿದೆಯೆಂದು ಘೋಷಿಸಲು ನಿಗದಿಪಡಿಸಲಾಗಿರುವ ಎಲ್ಲಾ ಮಾನದಂಡಗಳಿಗೆ ಪೂರಕವಾಗಿವೆ, ಎಂದು ಸ್ಕೈಮೇಟ್ ಹೇಳಿದೆ.

ಮೇ. 28 ಕ್ಕೆ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಲಿದೆಯೆಂದು ಸ್ಕೈಮೇಟ್ ಸಂಸ್ಥೆ ಈ ಹಿಂದೆಯೇ ಹೇಳಿತ್ತು. ಆದರೆ ಭಾರತೀಯ ಹವಾಮಾನ ಇಲಾಖೆ[IMD] ತಾನು ಈ ಹಿಂದೆ ಮುನ್ಸೂಚನೆ ನೀಡಿರುವ ದಿನಾಂಕವನ್ನೇ ಸಮರ್ಥಿಸಿಕೊಂಡಿದೆ. ಎರಡನೇ ದಿನ ಮಳೆಯ ಪ್ರಮಾಣವನ್ನು ಪರೀಕ್ಷಿಸಿದ ಬಳಿಕವಷ್ಟೇ ಮುಂಗಾರುವಿನ ಆಗಮನವನ್ನು ಘೋಷಿಸುವುದಾಗಿ ಹೇಳಿದೆ.      

ಸಾಮಾನ್ಯವಾಗಿ ಕೇರಳಕ್ಕೆ ಜೂ.1 ರಂದು ಮುಂಗಾರು ಪ್ರವೇಶಿಸುತ್ತದೆ, ಬಳಿಕ ಉತ್ತರದ ಕಡೆ ಚಲಿಸುತ್ತದೆ. ಜು.15ರ ಹೊತ್ತಿಗೆ ಇಡೀ ದೇಶದಲ್ಲಿ ಮಳೆಗಾಲ ಆರಂಭವಾಗುತ್ತದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಸ್ಕೈಮೇಟ್ ನೀಡಿದೆ.

ಬೇಗ ಮಳೆಗಾಲ ಆರಂಭವಾಗುವುದರಿಂದ ರೈತರಿಗೂ ತುಸು ಅನುಕೂಲವಾಗುತ್ತದೆ. ರೈತರು ಖಾರಿಫ್ ಕೃಷಿಯನ್ನು ಬೇಗನೇ ಆರಂಭಿಸಬಹುದಾಗಿದೆ. ಈ ಬಾರಿ ಸಾಧಾರರಣ ಮಳೆಯಾಗುವುದೆಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.   

Follow Us:
Download App:
  • android
  • ios