ಇಷ್ಟು ದಿನ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡೋದನ್ನ ಕೇಳಿದ್ದೇವೆ. ಆದರೆ ಇದೇ ಮೊದಲ ಬಾರಿ ಆಯುಧ ಹಿಡಿದು ವೃದ್ಧನ ಮೇಲರಿಗಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಕೋತಿಗಳು ವೃದ್ಧನ ಮೇಲೆ ಕಲ್ಲಿನಿಂದ ದಾಳಿ ಮಾಡಿದೆ. ಇಲ್ಲಿದೆ ಈ ಘಟನೆ ಮಾಹಿತಿ.

ಬಾಘ್‌ಪತ್‌(ಅ.21): ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಕೋತಿಗಳ ಕಲ್ಲಿನ ಹೊಡೆತಕ್ಕೆ ಸಿಲುಕಿದ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧರಂಪಾಲ್‌(70) ಮೃತ ದುರ್ದೈವಿ.

ಕಳೆದ ಬುಧವಾರ ಕಟ್ಟಿಗೆ ತರಲು ಹೋಗಿದ್ದ ಧರಂಪಾಲ್‌ ವೃದ್ಧನ ಮೇಲೆ ಕೆಲವು ಕೋತಿಗಳು ಇಟ್ಟಿಗೆ ಕಲ್ಲುಗಳಿಂದ ದಾಳಿ ಮಾಡಿವೆ. ಇದರಿಂದ ಗಾಯಗೊಂಡಿರುವ ಧರಂಪಾಲ್‌ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತನ ಸಹೋದರ ಕೃಷ್ಣಪಾಲ್‌ ಸಿಂಗ್‌ ಅವರು ಹೇಳಿದ್ದಾರೆ.

ಅಲ್ಲದೆ, ಈ ಕುರಿತು ಕೋತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಪೊಲೀಸರಿಗೆ ದೂರು ಸಹ ನೀಡಿದ್ದೇವೆ. ಆದರೆ, ಇದೊಂದು ಅಪಘಾತವೆಂದು ಪೊಲೀಸರು ಉಪೇಕ್ಷೆ ಮಾಡುತ್ತಿದ್ದಾರೆ ಎಂದು ಅವರು ಇದೇ ವೇಳೆ ದೂರಿದ್ದಾರೆ.

ಪೊಲೀಸರ ವಿಭಿನ್ನ ಹೇಳಿಕೆ:
‘ಅಂದು ಮಧ್ಯಾಹ್ನ ಧರಂಪಾಲ್‌ ಅವರು ಜೋಡಿಸಿ ಇಡಲಾಗಿದ್ದ ಇಟ್ಟಿಗೆ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ಕೋತಿಗಳು, ಇಟ್ಟಿಗೆ ಮೇಲೆ ಏರುವುದು ಮತ್ತು ಇಳಿಯುವುದನ್ನು ಮಾಡಿರುವುದರಿಂದ ಕೆಲವು ಇಟ್ಟಿಗೆಗಳು ಧರಂಪಾಲ್‌ ಅವರ ಮೇಲೆ ಬಿದ್ದು, ಈ ದುರ್ಘಟನೆ ಸಂಭವಿಸಿದೆ’ ಎಂದು ಪೊಲೀಸರು ಹೇಳುತ್ತಿದ್ದಾರೆ.