ಶಿವಮೊಗ್ಗ :  ಶಿವಮೊಗ್ಗ ಜಿಲ್ಲೆ ಸೇರಿ ಮಲೆನಾಡಿನಲ್ಲಿ ಉಲ್ಬಣಿಸಿದ್ದ ಮಾರಕ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ವಕೀಲರಾದ ಕೆ.ಪಿ. ಶ್ರೀಪಾಲ್ ಹಾಗೂ ಎನ್.ಜಿ. ರಮೇಶಪ್ಪ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾ ಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಶಿವಮೊಗ್ಗ ಜಿಲ್ಲಾ ವೈರಾಣು ರೋಗಲಕ್ಷಣ ಪತ್ತೆ ಪ್ರಯೋಗಾಲಯದ ಉಪ ನಿರ್ದೇಶಕ ಡಾ.ಎಸ್.ಕೆ.ಕಿರಣ್ ಪ್ರಮಾಣ ಪತ್ರ ಸಲ್ಲಿಸಿ ಈ ಮಾಹಿತಿ ನೀಡಿದರು. 

2018 ರ ಡಿಸೆಂಬರ್ ತಿಂಗಳಲ್ಲಿ ಮಂಗನ ಕಾಯಿಲೆಯು ಮಲೆನಾಡು ಭಾಗದಲ್ಲಿ ಶೇ 22.75ರಷ್ಟು ಪ್ರಮಾಣದಲ್ಲಿತ್ತು. ರೋಗದ ಪ್ರಮಾಣವು 2019 ರ  ಜನವರಿಯಲ್ಲಿ ಶೇ 8.55ರಷ್ಟು  ಹಾಗೂ ಫೆಬ್ರ ವರಿಯಲ್ಲಿ 7.09ಕ್ಕೆ ಕಡಿಮೆಯಾಯಿತು. ಆದರೆ, 2019ರ ಮಾರ್ಚ್ ವೇಳೆಗೆ ಶೇ 5.84ಕ್ಕೆ  ಇಳಿಮುಖವಾಗಿ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗ, ಮಣಿಪಾಲ ವೈರಾಣು ಪತ್ತೆ ಪ್ರಯೋಗಾಲಯ ಹಾಗೂ ಬೆಂಗಳೂರಿನ ವೈರಾಣು ರೋಗ ಪತ್ತೆಯ ರಾಷ್ಟ್ರೀಯ ಸಂಸ್ಥೆಯು ಈವರೆಗೂ 353  ಮಂಗನ ಕಾಯಿಲೆ ಪ್ರಕರಣಗಳನ್ನು  ದೃಢೀಕರಿಸಿವೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. 

ಅಲ್ಲದೆ, ಫೆಬ್ರವರಿಯಲ್ಲಿ ತೀರ್ಥಹಳ್ಳಿಯ ತೋಟದಕೊಪ್ಪದ ಲಾಚು ಪೂಜಾರಿ ಮತ್ತು ಮಾರ್ಚ್‌ನಲ್ಲಿ ಸಾಗರ ತಾಲ್ಲೂಕಿನ ಅಲಗೋಡು ಗ್ರಾಮದ ಪೂರ್ಣಿಮಾ ಹಾಗೂ ಲಿಂಗನಮಕ್ಕಿಯ ಮಂಜಪ್ಪ ಕಾರ್ಗಲ್ ಎಂಬುವರು ಮಂಗಲ ಕಾಯಿಲೆಯಿಂದ ಅಸುನೀಗಿದ್ದಾರೆ. ಕಾಯಿಲೆ ಪೀಡಿತ ಪ್ರದೇಶಗಳಲ್ಲಿ 1,40,000 ಡೋಸು ಗಳಷ್ಟು ಸೋಂಕು ರಕ್ಷಣೆ ಲಸಿಕೆ ವಿತರಿಸಲಾ ಗಿದೆ ಎಂದು ವಿವರಿಸಲಾಗಿದೆ.