ಮಕ್ಕಳು ಹಾಗೂ ಯುವಕರನ್ನು ಸೆಳೆದು, ಅವರನ್ನು ಆತ್ಮಹತ್ಯೆಗೆ ದೂಡುವ ಆನ್'ಲೈನ್‌'ನ ಅಪಾಯಕಾರಿ ಆಟ ‘ಬ್ಲೂವೇಲ್ ಚಾಲೆಂಜ್ ಗೇಮ್’ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಪೋಷಕರಿಗೆ ಹಲವು ಸಲಹೆಗಳನ್ನು ನೀಡಿದೆ

ನವದೆಹಲಿ(ಸೆ.17): ಮಕ್ಕಳು ಹಾಗೂ ಯುವಕರನ್ನು ಸೆಳೆದು, ಅವರನ್ನು ಆತ್ಮಹತ್ಯೆಗೆ ದೂಡುವ ಆನ್'ಲೈನ್‌'ನ ಅಪಾಯಕಾರಿ ಆಟ ‘ಬ್ಲೂವೇಲ್ ಚಾಲೆಂಜ್ ಗೇಮ್’ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಪೋಷಕರಿಗೆ ಹಲವು ಸಲಹೆಗಳನ್ನು ನೀಡಿದೆ.

ಪೋಷಕರು ಏನು ಮಾಡಬೇಕು?

1. ಬ್ಲೂವೇಲ್ ಗೇಮ್‌'ಗೆ ದಾಸನಾಗಿರುವ ಮಗು ಆನ್‌'ಲೈನ್ ಚಟುವಟಿಕೆಗಳನ್ನು ರಹಸ್ಯವಾಗಿ ನಡೆಸುತ್ತದೆ. ಅಂತಹ ಮಗುವಿನ ದೇಹದ ಮೇಲೆ ಕತ್ತರಿಸಿದ ಅಥವಾ ಗಾಯದ ಚಿಹ್ನೆ ಕಂಡು ಬರಬಹುದು. ಆನ್‌'ಲೈನ್ ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಮಯ ದಿಢೀರ್ ಹೆಚ್ಚಾಗಬಹುದು. ಪೋಷಕರು ಸ್ಕ್ರೀನ್ ನೋಡಲು ಬರುತ್ತಿದ್ದಂತೆ ಅದರ ಮೇಲಿನ ದೃಶ್ಯಗಳನ್ನು ದಿಢೀರ್ ಬದಲಿಸಬಹುದು.

2. ಹೊಸ ಫೋನ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸಗಳು ಮಕ್ಕಳ ಮೊಬೈಲ್‌'ನಲ್ಲಿ ಹೆಚ್ಚಾಗಿದ್ದರೆ ಆ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಮೊಬೈಲ್ ಪೇರೆಂಟಿಂಗ್ ಸಾಫ್ಟ್‌ವೇರ್ ಅಳವಡಿಸಿ, ಮಕ್ಕಳ ಮೇಲೆ ನಿಗಾ ಇಡಬೇಕು. ಜೀವನ್ಮರಣ ಸವಾಲು ಎದುರಾದರೆ ನಾನಿದ್ದೇನೆ ಎಂದು ಮಕ್ಕಳಲ್ಲಿ ಧೈರ್ಯ ತುಂಬಬೇಕು.

ಮಧ್ಯಪ್ರದೇಶದಲ್ಲಿ ಮತ್ತಿಬ್ಬರು ಬಲಿ?

ಮಧ್ಯಪ್ರದೇಶದಲ್ಲಿ ಬ್ಲೂವೇಲ್ ಆಟಕ್ಕೆ ಇಬ್ಬರು ಯುವಕರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯದ ದತಿಯಾ ಜಿಲ್ಲೆಯಲ್ಲಿ ಶಿವಮ್ ದಂಗಿ (18) ಮತ್ತು ಸಾಗರ್ ಯೋಗಿ (19) ತಮ್ಮ ಮನೆಯಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಬ್ಬರೂ ಮೈ ಮೇಲೂ ಬ್ಲೂವೇಲ್ ರೀತಿ ಕೊರೆದುಕೊಂಡಿರುವ ಗಾಯಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಬ್ಲೂವೇಲ್ ಆಟವನ್ನು ಸ್ವೀಕರಿಸಿರಬೇಕು ಎಂದು ಶಂಕಿಸಲಾಗಿದೆ