ಬೆಂಗಳೂರು [ಜು.20] :   ಬ್ರಿಟನ್ ಮತ್ತು ಕೆನಡಾ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನೇಪಾಳದ ಯುವಕನಿಗೆ ನಂಬಿಸಿದ ವಂಚಕರ ಜಾಲವೊಂದು, ಬಳಿಕ ಆತನನ್ನು ನಗರಕ್ಕೆ ಕರೆಸಿಕೊಂಡು ಹಣ ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಜಾಲ ಸಮೀಪ ನಡೆದಿದೆ.

ನೇಪಾಳ ಮೂಲದ ರಾಕೇಶ್ ಯಾದವ್ ಎಂಬುವವರೇ ಸಂತ್ರಸ್ತರಾಗಿದ್ದು, ಮೂರು ದಿನಗಳ ಹಿಂದೆ ಉದ್ಯೋಗ ಆಸೆಯಿಂದ ಬಂದ ಆತ ಮೋಸಕ್ಕೊಳಗಾಗಿದ್ದಾನೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ರಣವೀರ್ ಸಿಂಗ್ ಮತ್ತು ಆತನ ಸಹಚರರ ಪತ್ತೆಗೆ ಈಶಾನ್ಯ ವಿಭಾಗದ ಪೊಲೀಸರು ಬಲೆ ಬೀಸಿದ್ದಾರೆ.

ನೇಪಾಳದ ರಾಕೇಶ್ ಪಿಯುಸಿ ವ್ಯಾಸಂಗ ಮಾಡಿದ್ದು, ಅಂತರ್ಜಾಲದಲ್ಲಿ ಉದ್ಯೋಗಕ್ಕಾಗಿ ಆತ ಹುಡುಕಾಟ ನಡೆಸಿದ್ದ. ಹತ್ತು ದಿನಗಳ ಹಿಂದೆ ಆತನಿಗೆ ಫೇಸ್‌ಬುಕ್‌ನಲ್ಲಿ ರಣವೀರ್ ಸಿಂಗ್ ಎಂಬಾತನ ಪರಿಚಯವಾಗಿದೆ. ತನ್ನ ಫೇಸ್‌ಬುಕ್ ಖಾತೆಯಲ್ಲಿ ರಣವೀರ್, ತಾನು ಯುಕೆ ಮತ್ತು ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದ. ಇದನ್ನು ಗಮನಿಸಿದ ರಾಕೇಶ್, ಆ ಖಾತೆಯಲ್ಲಿದ್ದ ರಣವೀರ್ ಮೊಬೈಲ್ ನಂಬರ್ ತೆಗೆದುಕೊಂಡು ಸಂಪರ್ಕಿಸಿದ್ದ. 

ರಣವೀರ್ ಹೇಳಿದಂತೆ ಅದರಂತೆ ಜು.15ರಂದು ಸೋಮವಾರ 2000 ಯುಎಸ್ ಡಾಲರ್, 2.30 ಲಕ್ಷ ನೇಪಾಳ ಹಣ ಮತ್ತು ನೇಪಾಳ ದೇಶದ ಪಾಸ್‌ಪೋರ್ಟ್‌ನೊಂದಿಗೆ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ರಾಕೇಶ್ ಬಂದಿದ್ದಾನೆ. ವಿಮಾನ ನಿಲ್ದಾಣದಲ್ಲಿ ಆತನನ್ನು ಬರಮಾಡಿಕೊಂಡ ರಣವೀರ್ ಸಿಂಗ್ ತಂಡ, ಬಳಿಕ ಚಿಕ್ಕಜಾಲ ಸಮೀಪದ ತರಬನಹಳ್ಳಿಯ ಸೂರ್ಯ ರೆಸಿಡೆನ್ಸ್ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

‘ನನಗೆ ಜು.16 ರಂದು ಬೆಳಗ್ಗೆ 9 ಕ್ಕೆ ತಿನ್ನಲು ಪುರಿ ತಂದು ಕೊಟ್ಟರು. ಅದನ್ನು ಸೇವಿಸಿದ ನಂತರ ನನಗೆ ಪ್ರಜ್ಞೆ ತಪ್ಪಿತು. ಎರಡ್ಮೂರು ಗಂಟೆಗಳ ನಂತರ ವಾಂತಿಯಾಗಿ ನಿತ್ರಾಣನಾದೆ. ಅಷ್ಟರಲ್ಲಾಗಲೇ ರಣವೀರ್ ಮತ್ತು ಆತನ ಸ್ನೇಹಿತರು ನಾಪತ್ತೆಯಾಗಿದ್ದರು. ನನ್ನನ್ನು ಎನ್‌ಆರ್‌ವಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನಿಂದ ಹಣ ಪಡೆದು ಮೋಸ ಮಾಡಿದ ಪತ್ತೆ ಮಾಡಿ ಕಾನೂನು ಕ್ರಮ ಕ್ರಮ ತೆಗೆದುಕೊಳ್ಳಬೇಕು ಎಂದು ರಾಕೇಶ್ ಮನವಿ ಮಾಡಿದ್ದಾರೆ. ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.