ಬೆಂಗಳೂರು(ಸೆ.01): ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮತ್ತೇ ಸೋಮವಾರ ವಿಶೇಷ ಅಧಿವೇಶನ ಕರೆದಿದ್ದು, ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಮಂತ್ರಿ ಪರಿಷತ್ ಸಭೆ ನಂತರ ಮಾತನಾಡಿದ ಅವರು ಸರ್ವಪಕ್ಷ ಸಭೆಯಲ್ಲಿ ನೀರು ಬಿಡದಂತೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ವಿಶೇಷ ಅಧಿವೇಶನ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದಾರೆ. ನಾವು ನೀರು ಬಿಡುವುದಿಲ್ಲವೆಂದು ಸದನದಲ್ಲಿ ಅನುಮತಿ ಪಡೆದಿದ್ದೆವೆ. ನಾವು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿಲ್ಲ. ಸದನದ ಸೂಚನೆ ಇರುವುದರಿಂದ ನಾವು ಅದನ್ನು ಪಾಲಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸುಪ್ರೀಂಕೋರ್ಟ್ನ ಆದೇಶದಲ್ಲಿ ಮೂರು ಆದೇಶಗಳಿವೆ. ಕಾವೇರಿ ನಿರ್ವಹಣಾ ಮಂಡಳಿ ಮಾಡಬೇಕು ಅಂತ ಹೇಳಿದೆ. ಅದನ್ನು ಕೇಂದ್ರ ಸರ್ಕಾರ ಮಾಡುವುದಾಗಿ ಹೇಳಿದೆ . ಕಾವೇರಿ ನಿರ್ವಹಣಾ ಮಂಡಳಿಗೆ ನಮ್ಮ ವಿರೋಧವಿದೆ. ರಾಜ್ಯಕ್ಕೆ ತಜ್ಞರನ್ನು ಕಳುಹಿಸಲು ಮನವಿ ಮಾಡಿದ್ದೆವು. 2 ರಾಜ್ಯಗಳಿಗೆ ತಜ್ಞರನ್ನು ಕಳುಹಿಸಲು ಮನವಿ ಮಾಡಿದ್ದೆವು. ಕಾವೇರಿ ಮೇಲುಸ್ತುವಾರಿ ಸಮಿತಿ ಮಾಡುವ ಅಧಿಕಾರ ಈ ಪೀಠಕ್ಕಿಲ್ಲ. ಪಾಂಡಿಚೇರಿ, ಕೇರಳಕ್ಕೆ ನೋಟಿಸ್ ನೀಡದೆ ಈ ಆದೇಶ ಮಾಡಲಾಗಿದೆ. ಅದನ್ನು ಪ್ರಶ್ನಿಸಿ ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ನಾರಿಮನ್ ಬದಲಿಗೆ ಬೇರೆಯವರು : ನಾರಿಮಾನ್ ಸುಪ್ರಿಂ ಕೋರ್ಟ್ನಲ್ಲಿ ವಾದ ಮಾಡಲು ಹಿಂದೇಟು ಹಾಕಿದರೆ ಬೇರೆಯವರ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
