Asianet Suvarna News Asianet Suvarna News

ಮಕ್ಕಳ ಟಿಕೆಟ್‌ಗೆ ಅಡ್ಡಿಯಾಗಿದ್ದಕ್ಕೆ ಮೂಲ ಕಾಂಗ್ರೆಸ್ಸಿಗರ ಆಕ್ರೋಶ

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಮೇಲೆ ನಿಯಂತ್ರಣ ಸಾಧಿ​ಸಲು ಮೂಲ ಕಾಂಗ್ರೆ​ಸ್ಸಿ​ಗರು ಹಾಗೂ ಸಿದ್ದು ಕಾಂಗ್ರೆಸ್‌ ನಡು​ವೆ ನಡೆ​ದಿ​ರುವ ಪೈಪೋ​ಟಿಯ ಫಲವೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರನ ಟ್ವೀಟ್‌ ಎಂದು ಕಾಂಗ್ರೆಸ್‌ ವಲ​ಯ​ದಲ್ಲಿ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿದೆ

Moily Tweet Bomb News

ಬೆಂಗ​ಳೂರು : ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಮೇಲೆ ನಿಯಂತ್ರಣ ಸಾಧಿ​ಸಲು ಮೂಲ ಕಾಂಗ್ರೆ​ಸ್ಸಿ​ಗರು ಹಾಗೂ ಸಿದ್ದು ಕಾಂಗ್ರೆಸ್‌ ನಡು​ವೆ ನಡೆ​ದಿ​ರುವ ಪೈಪೋ​ಟಿಯ ಫಲವೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರನ ಟ್ವೀಟ್‌ ಎಂದು ಕಾಂಗ್ರೆಸ್‌ ವಲ​ಯ​ದಲ್ಲಿ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿದೆ.

ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಬೆನ್ನಲ್ಲಿ ನಿಂತು ಲೋಕೋ​ಪ​ಯೋಗಿ ಸಚಿವ ಡಾ. ಎಚ್‌.ಸಿ. ಮಹ​ದೇ​ವಪ್ಪ ಅವರು ಟಿಕೆಟ್‌ ಹಂಚಿ​ಕೆ​ಯನ್ನು ನಿಯಂತ್ರಿ​ಸಲು ಯತ್ನಿ​ಸಿದ್ದು ಮೂಲ ಕಾಂಗ್ರೆ​ಸ್ಸಿ​ಗ​ರನ್ನು ಸಿಟ್ಟಿ​ಗೆ​ಬ್ಬಿ​ಸಿದೆ. ಇತ್ತೀ​ಚೆಗೆ ನಡೆದ ಕಾಂಗ್ರೆಸ್‌ ಚುನಾ​ವಣಾ ಸಮಿ​ತಿಯ ಸಭೆ​ಯಲ್ಲಿ ಇದು ವ್ಯಕ್ತ​ವಾ​ದರೂ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಉಪ​ಸ್ಥಿ​ತಿ​ಯಿಂದಾಗಿ ವಿಕೋ​ಪಕ್ಕೆ ಹೋಗಿ​ರ​ಲಿಲ್ಲ. ಆದರೆ, ಕಾರ್ಕ​ಳ​ ವಿಧಾ​ನ​ಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಹರ್ಷ ಮೊಯ್ಲಿ ಅವರ ಏಕ ಮಾತ್ರ ಹೆಸರು ಶಿಫಾ​ರ​ಸು ಆಗದಂತೆ ತಡೆದ ಮಹ​ದೇ​ವಪ್ಪ ಅವರ ಧೋರ​ಣೆ​ಯಿಂದ ಮೊಯ್ಲಿ ಅವರ ವ್ಯಗ್ರ​ರಾ​ಗಿದ್ದು, ಅದು ಟ್ವೀಟ್‌ ಸ್ವರೂಪ ಪಡೆ​ದು​ಕೊಂಡಿದೆ ಎಂದು ಮೂಲ​ಗಳು ಹೇಳು​ತ್ತ​ವೆ.

ವಾಸ್ತ​ವ​ವಾಗಿ ಚುನಾ​ವಣಾ ಸಮಿ​ತಿ​ಯಲ್ಲಿ ಮಹ​ದೇ​ವಪ್ಪ ಅವರು ತಮ್ಮ ವ್ಯಾಪ್ತಿಗೆ ಬರದ ಕ್ಷೇತ್ರ​ಗ​ಳಲ್ಲೂ ಅಭ್ಯ​ರ್ಥಿ​ಗ​ಳನ್ನು ಸೂಚಿ​ಸಲು ಯತ್ನಿ​ಸಿದ್ದು ಮತ್ತು ಏಕ ಹೆಸರು ಶಿಫಾ​ರಸು ಆಗಿದ್ದ ಕೆಲ ಕ್ಷೇತ್ರ​ಗ​ಳಲ್ಲಿ ಪ್ಯಾನೆಲ್‌ (ಎ​ರ​ಡ​ಕ್ಕಿಂತ ಹೆಚ್ಚು ಹೆಸ​ರು) ಆಗು​ವಂತೆ ಮಾಡಿದ್ದು ಮತ್ತು ಎಲ್ಲ​ಕ್ಕಿಂತ ಮುಖ್ಯ​ವಾಗಿ ಮೊಯ್ಲಿ ಹಾಗೂ ಮುನಿ​ಯಪ್ಪ ಅವ​ರಂತಹ ಮೂಲ ಕಾಂಗ್ರೆ​ಸ್ಸಿ​ಗರ ಮಕ್ಕಳು ಟಿಕೆಟ್‌ ಬಯ​ಸಿದ್ದ ಕ್ಷೇತ್ರ​ಗ​ಳಿಗೆ ಏಕ ಹೆಸರು ಶಿಫಾ​ರಸು ಆಗಿ​ದ್ದನ್ನು ತಡೆ​ದಿದ್ದು ಮೂಲ ಕಾಂಗ್ರೆ​ಸ್ಸಿ​ಗ​ರನ್ನು ರೊಚ್ಚಿ​ಗೆ​ಬ್ಬಿ​ಸಿದೆ. ಅದನ್ನು ಮೊಯ್ಲಿ ಮಾತ್ರ ಬಹಿ​ರಂಗ​ವಾಗಿ ವ್ಯಕ್ತ​ಪ​ಡಿ​ಸಿ​ದ್ದಾರೆ ಎನ್ನ​ಲಾ​ಗು​ತ್ತಿ​ದೆ.

ಸಭೆ 2 ತಂಡವಾಗಿ ವಿಭಜನೆ:

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಚುನಾ​ವಣಾ ಸಮಿತಿ ಸಭೆ​ಯಲ್ಲಿ ಸ್ಪಷ್ಟ​ವಾಗಿ ಎರಡು ತಂಡ​ಗಳು ನಿರ್ಮಾ​ಣ​ವಾ​ಗಿದ್ದು, ಡಿ.ಕೆ. ಶಿವ​ಕು​ಮಾರ್‌, ಪರ​ಮೇ​ಶ್ವರ್‌, ಮೊಯ್ಲಿ, ಮುನಿ​ಯಪ್ಪ ಅವ​ರಂತಹ ನಾಯ​ಕರು ಒಂದಷ್ಟುಅಭ್ಯ​ರ್ಥಿ​ಗಳ ಪರ ವಾದಿ​ಸಿ​ದರೆ, ಅವ​ರಿಗೆ ಪ್ರತಿ​ ಅಭ್ಯ​ರ್ಥಿ​ಗ​ಳನ್ನು ಸಿದ್ದ​ರಾ​ಮಯ್ಯ, ದಿನೇಶ್‌ ಗುಂಡೂ​ರಾವ್‌, ಮಹ​ದೇ​ವಪ್ಪ ಹಾಗೂ ಮೋಟ​ಮ್ಮ ಅವ​ರಂತಹ ನಾಯ​ಕರು ಸೂಚಿ​ಸ​ತೊ​ಡ​ಗಿದ್ದು ಟಿಕೆಟ್‌ ಹಂಚಿ​ಕೆ​ಯನ್ನು ಕ್ಲಿಷ್ಟಗೊಳಿ​ಸಿತ್ತು ಎನ್ನ​ಲಾ​ಗಿ​ದೆ.

ಮೂಲ​ಗಳ ಪ್ರಕಾರ, ಟಿಕೆಟ್‌ ಹಂಚಿಕೆ ಸುಗ​ಮ​ಗೊ​ಳಿ​ಸಲು ಸಭೆ​ಯಲ್ಲಿ ನಾಲ್ಕು ತಂಡ​ಗ​ಳನ್ನು ರಚಿ​ಸ​ಲಾ​ಗಿತ್ತು. ಬೆಂಗ​ಳೂರು ವಿಭಾ​ಗಕ್ಕೆ ಡಿ.ಕೆ. ಶಿವ​ಕು​ಮಾರ್‌ ನೇತೃ​ತ್ವ​ವಿ​ದ್ದರೆ, ಮೊಯ್ಲಿ ಹಾಗೂ ಇತ​ರರು ಸದ​ಸ್ಯ​ರಾ​ಗಿ​ದ್ದರು. ಅದೇ ರೀತಿ ಮೈಸೂರು ವಿಭಾ​ಗಕ್ಕೆ ದಿನೇಶ್‌ ಗುಂಡೂ​ರಾವ್‌ ನೇತೃ​ತ್ವ​ವಿ​ದ್ದರೆ, ಮಹ​ದೇ​ವಪ್ಪ ಹಾಗೂ ಇತ​ರರು ಸದ​ಸ್ಯ​ರಾ​ಗಿ​ದ್ದರು. ಉಳಿದ ಎರಡು ವಿಭಾ​ಗ​ಗ​ಳಿಗೆ ಎಸ್‌.​ಆರ್‌. ಪಾಟೀಲ್‌ ಹಾಗೂ ಹರಿ​ಪ್ರ​ಸಾದ್‌ ನೇತೃ​ತ್ವ ​ವ​ಹಿ​ಸಿ​ದ್ದ​ರು. ಈ ತಂಡ​ಗಳು ಅಂತಿ​ಮ​ಗೊ​ಳಿ​ಸಿದ ಪಟ್ಟಿ​ಯನ್ನು ಅಂತಿ​ಮ​ವಾಗಿ ಹಿರಿಯ ಮುಖಂಡರ ಸಮ್ಮುಖ ತಂದು ಪಟ್ಟಿ​ಯನ್ನು ಆಖೈ​ರು​ಗೊ​ಳಿ​ಸುವ ಪ್ರಕ್ರಿಯೆ ಸಭೆ​ಯಲ್ಲಿ ನಡೆ​ದಿ​ತ್ತು. ಈ ಪ್ರಕ್ರಿಯೆ ನಡೆ​ಯು​ವಾಗ ಮಹ​ದೇ​ವಪ್ಪ ಅವರು ತಾವಿದ್ದ ವಿಭಾ​ಗದ ವಿಚಾ​ರ​ದಲ್ಲಿ ಮಾತ್ರ​ವ​ಲ್ಲದೆ, ಬೆಂಗ​ಳೂರು ವಿಭಾ​ಗ​ದಲ್ಲೂ ಮೂಗು ತೂರಿ​ಸಿದ್ದೇ ಸಮ​ಸ್ಯೆಯ ಮೂಲ ಎನ್ನ​ಲಾ​ಗು​ತ್ತಿದೆ.

ಮೂಲ​ಗಳ ಪ್ರಕಾರ ನಾಲ್ಕು ವಿಚಾ​ರ​ಗ​ಳಲ್ಲಿ ಮಹ​ದೇ​ವಪ್ಪ ಹಾಗೂ ಮೊಯ್ಲಿ ನೇತೃ​ತ್ವದ ಮೂಲ ಕಾಂಗ್ರೆ​ಸ್ಸಿ​ಗ​ರೊಂದಿಗೆ ಮಾತಿನ ಚಕ​ಮಕಿ ನಡೆ​ದಿದೆ. ಅವು-

ದೇವ​ನ​ಹಳ್ಳಿ ಕ್ಷೇತ್ರದ ಟಿಕೆ​ಟ್‌:

ಡಿ.ಕೆ. ಶಿವ​ಕು​ಮಾ​ರ್‌ ನೇತೃ​ತ್ವದ ಸಮಿ​ತಿಯು ಈ ಕ್ಷೇತ್ರಕ್ಕೆ ಕಳೆದ ಬಾರಿಯ ಅಭ್ಯರ್ಥಿ ವೆಂಕ​ಟ​ಸ್ವಾಮಿ ಅವರ ಏಕ ಮಾತ್ರ ಹೆಸರು ಸೂಚಿ​ಸಿತ್ತು. ಇದಕ್ಕೆ ಆಕ್ಷೇ​ಪ ವ್ಯಕ್ತ​ಪ​ಡಿ​ಸಿದ ಮಹ​ದೇ​ವಪ್ಪ ಅವರು ಚೆಲು​ವಾದಿ ನಾರಾ​ಯ​ಣ ಸ್ವಾಮಿ ಅವರ ಹೆಸ​ರನ್ನು ಸೇರಿಸಿ ಪ್ಯಾನೆಲ್‌ ಮಾಡು​ವಂತೆ ಸಲಹೆ ನೀಡಿ​ದ್ದಾರೆ. ಈ ಹಂತ​ದಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ಸ್ಥಳೀಯ ಸಂಸ​ದರು (ವೀ​ರಪ್ಪ ಮೊಯ್ಲಿ) ಸೂಚಿ​ಸಿ​ದ್ದ​ರಿಂದ ವೆಂಕ​ಟ​ಸ್ವಾಮಿ ಅವರ ಒಂದೇ ಹೆಸ​ರನ್ನು ನೀಡ​ಲಾ​ಗಿದೆ ಎಂದು ಸಮ​ಜಾ​ಯಿಷಿ ನೀಡಿದರು. ಇದಕ್ಕೆ ಮಹ​ದೇ​ವಪ್ಪ ಅವರು ‘ಎಲ್ಲಾ ಸಂಸ​ದರೇ ಹೇಳಿದ್ದು ಮಾಡು​ವು​ದಾ​ದರೇ ನಾವ್ಯಾಕೆ ಈ ಸಭೆಗೆ ಬರ​ಬೇಕು’ ಎಂದಿದ್ದು ಮೊಯ್ಲಿ ಅವ​ರಿಗೆ ಸಿಟ್ಟು ತರಿ​ಸಿದೆ. ಆಗ ಮೊಯ್ಲಿ ಅವರು ‘ನಾನು ಈ ಕ್ಷೇತ್ರದ ಎಂಪಿ. ನೀವು ಯಾರದ್ದೋ ಹೆಸರು ಸೂಚಿಸಿ ಹೋಗು​ತ್ತೀರಿ. ಚುನಾ​ವ​ಣೆ​ಯಲ್ಲಿ ಸೋಲುಂಟಾ​ದರೆ ಹೈಕ​ಮಾಂಡ್‌ಗೆ ಉತ್ತ​ರಿ​ಸ​ಬೇ​ಕಾ​ದ​ವರೂ ಸ್ಥಳೀಯ ಸಂಸ​ದ​ರಾದ ನಾವು. ಹೀಗಾಗಿ ಇಂತಹ ಮಾತು ಬೇಡ ಎಂದು ಎಚ್ಚ​ರಿಕೆ ನೀಡಿ​ದರು’ ಎನ್ನ​ಲಾ​ಗಿ​ದೆ. ಅಂತಿ​ಮ​ವಾಗಿ ಮಹ​ದೇ​ವಪ್ಪ ಹಾಗೂ ಮೋಟಮ್ಮ ಅವರ ಲಾಬಿಯ ಪರಿ​ಣಾಮ ಪ್ಯಾನೆಲ್‌ಗೆ ಚೆಲು​ವಾದಿ ನಾರಾ​ಯ​ಣ ಸ್ವಾಮಿ ಹೆಸರು ಸೇರ್ಪ​ಡೆ​ಯಾ​ಗಿ​ದೆ.

ಮಹ​ದೇ​ವ​ಪುರ ಕ್ಷೇತ್ರ:

ಈ ಕ್ಷೇತ್ರಕ್ಕೆ ಎ.ಸಿ. ಶ್ರೀನಿ​ವಾಸ್‌ ಅವರ ಏಕೈಕ ಹೆಸ​ರನ್ನು ಶಿವ​ಕು​ಮಾರ್‌ ನೇತೃ​ತ್ವದ ಸಮಿತಿ ಸೂಚಿ​ಸಿತ್ತು. ಆದರೆ, ಮುಖಂಡರ ಮುಂದೆ ಚರ್ಚೆಗೆ ಈ ವಿಚಾರ ಬಂದಾಗ ಮಹ​ದೇ​ವಪ್ಪ ಹಾಗೂ ಮೋಟಮ್ಮ ಅವರು ‘ನಲ್ಲೂ​ರ​ಹಳ್ಳಿ ನಾಗೇಶ್‌ ಅವರ ಹೆಸ​ರನ್ನು ಸೇರಿಸಿ ಪ್ಯಾನೆಲ್‌ ಮಾಡ​ಬೇಕು’ ಎಂದು ಒತ್ತಾ​ಯಿ​ಸಿ​ದರು ಎನ್ನ​ಲಾ​ಗಿದೆ. ಇದು ಶಿವ​ಕು​ಮಾರ್‌ ಹಾಗೂ ಮೊಯ್ಲಿ ಅವ​ರಿಗೆ ಸಿಟ್ಟು ತರಿ​ಸಿದ್ದು, ‘ಶ್ರೀನಿ​ವಾಸ್‌ ಅತ್ಯಂತ ಕಡಿಮೆ ಮತ​ಗ​ಳಿಂದ ಕಳೆದ ಬಾರಿ ಸೋಲುಂಡಿ​ದ್ದಾರೆ. ನೀವು ಸೂಚಿ​ಸು​ತ್ತಿ​ರುವ ನಲ್ಲೂ​ರ​ಹಳ್ಳಿ ನಾಗೇಶ್‌ ಪಕ್ಷದಲ್ಲಿ ಸಕ್ರಿ​ಯ​ರಾ​ಗಿಲ್ಲ. ಅವರ ವಿರುದ್ಧ ಪಾರ್ಟಿ ವಿರುದ್ಧ ಕೆಲಸ ಮಾಡಿದ ಆರೋ​ಪ​ಗಳು ಇವೆ. ಹೀಗಾಗಿ ಅವರ ಹೆಸರು ಪ್ಯಾನೆ​ಲ್‌ಗೆ ಸೂಚಿ​ಸು​ವುದು ಬೇಡ’ ಎಂದು ಪ್ರಬ​ಲ​ವಾಗಿ ವಾದಿ​ಸಿ​ದ್ದಾರೆ. ಈ ಹಂತ​ದಲ್ಲಿ ಹರಿ​ಪ್ರ​ಸಾದ್‌ ಅವ​ರು ಸೂಚಿ​ಸಿದ ಯಲ್ಲಪ್ಪ ಎಂಬು​ರನ್ನು ಸೇರಿಸಿ ಪ್ಯಾನೆಲ್‌ ಮಾಡ​ಲಾ​ಗಿದೆ ಎಂದು ಮೂಲ​ಗಳು ಹೇಳಿ​ವೆ.

ಕುಣಿ​ಗಲ್‌ ಕ್ಷೇತ್ರದ ಜಟಾ​ಪ​ಟಿ:

ಕುಣಿ​ಗಲ್‌ ಕ್ಷೇತ್ರಕ್ಕೆ ಶಿವ​ಕು​ಮಾರ್‌ ನೇತೃ​ತ್ವದ ಸಮಿತಿ ಡಾ. ರಂಗ​ನಾಥ್‌ ಅವರ ಏಕೈಕ ಹೆಸ​ರನ್ನು ಸೂಚಿ​ಸಿ​ದೆ. ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಡಾ. ರಂಗ​ನಾಥ್‌ ಅವರು ಡಿ.ಕೆ. ಶಿವ​ಕು​ಮಾರ್‌ ಅವರ ಪತ್ನಿಯ ತಂಗಿಯ ಪತಿ (ಷ​ಡ್ಡಕ). ಆದರೆ, ಏಕ ಹೆಸರು ಶಿಫಾ​ರ​ಸಿಗೆ ಒಪ್ಪದ ಮಹ​ದೇ​ವಪ್ಪ ಅವರು ಮಾಜಿ ಶಾಸಕ ರಾಮ​ಸ್ವಾಮಿ ಗೌಡ ಅವರ ಹೆಸ​ರನ್ನು ಸೇರಿಸಿ ಪ್ಯಾನೆಲ್‌ ಮಾಡು​ವಂತೆ ಸೂಚಿ​ಸಿ​ದ್ದಾರೆ. ಇದು ಡಿಕೆಶಿ ಸಹೋ​ದ​ರ​ರನ್ನು ಕೆರ​ಳಿ​ಸಿದ್ದು, ಇಬ್ಬರು ಮಹ​ದೇ​ವಪ್ಪ ವಿರುದ್ಧ ಮಾತ​ನಾ​ಡಿ​ದ್ದಾರೆ. ಈ ಕ್ಷೇತ್ರ​ದಲ್ಲಿ ಕೆಲಸ ಮಾಡಿ ಗೆಲ್ಲಿ​ಸು​ವ​ವರು ನಾವು. ನಿಮ್ಮ ವ್ಯಾಪ್ತಿ​ಯ​ಲ್ಲದ ಈ ಕ್ಷೇತ್ರ​ದಲ್ಲಿ ನೀವು ಮಾತ​ನಾ​ಡು​ವುದು ಬೇಡ ಎಂದು ತಾಕೀತು ಮಾಡಿ​ದರೂ ಎಂದು ಹೇಳ​ಲಾ​ಗಿ​ದೆ. ಆದರೂ, ಮಹ​ದೇ​ವಪ್ಪ ಪಟ್ಟು ಬಿಡದ ಕಾರಣ ರಾಮ​ಸ್ವಾ​ಮಿ​ಗೌಡ ಅವ​ರಿದ್ದ ಪ್ಯಾನೆಲ್‌ ರಚ​ನೆ​ಯಾ​ಗಿ​ದೆ.

ಟಿ.ನ​ರ​ಸೀ​ಪುರ ಟಿಕೆ​ಟ್‌:

ಮೊಯ್ಲಿ ಹಾಗೂ ಮಹ​ದೇ​ವಪ್ಪ ವಿರುದ್ಧ ತೀವ್ರ ಮಾತಿನ ಚಕ​ಮಕಿ ಹಾಗೂ ಮುನಿಸು ಉಂಟಾ​ಗಿದ್ದು ಟಿ. ನರ​ಸೀ​ಪುರ ಕ್ಷೇತ್ರದ ಟಿಕೆಟ್‌ ಸಂದ​ರ್ಭ​ದಲ್ಲಿ ಹಾಗೂ ಇದಕ್ಕೆ ಸಂವಾ​ದಿ​ಯಾಗಿ ಕಾರ್ಕಳ ಕ್ಷೇತ್ರದ ವಿಚಾ​ರವೂ ಪ್ರಸ್ತಾ​ಪ​ವಾ​ದಾಗ ಎನ್ನು​ತ್ತವೆ ಮೂಲ​ಗ​ಳು. ಟಿ.ನ​ರ​ಸೀ​ಪು​ರ​ದಲ್ಲಿ ತಮ್ಮ ಪುತ್ರ ಸುನೀಲ್‌ ಬೋಸ್‌ ಹೆಸರು ಮಾತ್ರ​ವಿದ್ದ ಪ್ಯಾನೆಲ್‌ ದಿನೇಶ್‌ ಗುಂಡೂ​ರಾವ್‌ ನೇತೃ​ತ್ವದ ಸಮಿ​ತಿ​ಯಿಂದ ಬಂದಿದೆ. ಈ ಸಮಿ​ತಿಗೆ ಮಹ​ದೇ​ವಪ್ಪ ಅವರು ಸದ​ಸ್ಯರು. ಆದರೆ, ಇದಕ್ಕೆ ಹಲವು ಮೂಲ ಕಾಂಗ್ರೆಸ್‌ ನಾಯ​ಕರು ಆಕ್ಷೇ​ಪಿ​ಸಿದ್ದು, ‘ಸುನೀಲ್‌ ಬೋಸ್‌ಗೆ ಕ್ಷೇತ್ರ ಉತ್ತ​ಮ​ವಾ​ಗಿಲ್ಲ ಎಂಬ ಸಮೀಕ್ಷೆ ವರದಿ ಬಂದಿದೆ. ಅಲ್ಲದೆ, ಸಿಎಂ ಅವರು ಇರುವ ಜಿಲ್ಲೆ​ಯಿದು. ರಾಜ್ಯದ ಹೊಣೆ ಹೊತ್ತು ಅವರು ರಾಜ್ಯಾ​ದ್ಯಂತ ಸಂಚ​ರಿ​ಸು​ತ್ತಾರೆ. ಹೀಗಾಗಿ ನೀವು ಮೈಸೂರು ಜಿಲ್ಲೆಯ ಹೊಣೆ ನೋಡ​ಬೇ​ಕಾ​ಗು​ತ್ತದೆ. ಹೀಗಾಗಿ ನೀವು ಬೆಂಗ​ಳೂ​ರಿನ ಸಿ.ವಿ. ರಾಮ​ನ್‌​ನ​ಗ​ರಕ್ಕೆ ಬರು​ವುದು ಬೇಡ. ಟಿ.ನ​ರ​ಸೀ​ಪು​ರ​ದಲ್ಲೇ ಸ್ಪರ್ಧಿಸಿ’ ಎಂದು ಸಲಹೆ ನೀಡಿ​ದರು ಎನ್ನ​ಲಾ​ಗಿ​ದೆ.

ಇದಕ್ಕೆ ಕೂಡಲೇ ಒಪ್ಪಿ​ಕೊಂಡಂತೆ ವರ್ತಿ​ಸಿದ ಮಹ​ದೇ​ವಪ್ಪ ಅವರು, ‘ಸರಿ ಹಾಗಾ​ದರೆ, ನನ್ನ ಮಗ​ನಿಗೆ ಟಿಕೆಟ್‌ ಕೊಡು​ವುದು ಬೇಡ ಎಂದು ಪಕ್ಷ ನಿರ್ಧ​ರಿ​ಸಿ​ದರೆ ನಾನು ಒಪ್ಪು​ತ್ತೇ​ನೆ. ಇದು ಪಕ್ಷದ ನಿಯ​ಮವೇ ಆಗಲಿ. ಕಾರ್ಕ​ಳ​ದಲ್ಲಿ ಮೊಯ್ಲಿ ಅವರ ಪುತ್ರ​ನಿಗೆ, ಕೆಜಿ​ಎಫ್‌ನಲ್ಲಿ ಮುನಿ​ಯಪ್ಪ ಪುತ್ರಿಗೆ, ಜಯ​ನ​ಗ​ರ​ದಲ್ಲಿ ರಾಮ​ಲಿಂಗಾ​ರೆಡ್ಡಿ ಅವರ ಪುತ್ರಿಗೂ ಇದೇ ನಿಯಮ ಅನ್ವ​ಯಿಸಿ’ ಎಂದಿ​ದ್ದಾರೆ. ಇದು ಮೂಲ ಕಾಂಗ್ರೆ​ಸ್ಸಿ​ಗ​ರನ್ನು ಗರಂ ಆಗಿ​ಸಿ​ದ್ದರೆ, ವಿಷಯ ಕೈ ಮೀರು​ತ್ತಿ​ರು​ವು​ದನ್ನು ಅರಿತ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಅವರು ‘ಅಪ್ಪ-ಮಕ್ಕಳು ಟಿಕೆಟ್‌ ಬಯ​ಸಿ​ರುವ ಕ್ಷೇತ್ರ​ಗಳ ಬಗ್ಗೆ ಹೈಕ​ಮಾಂಡ್‌ ನಿರ್ಧಾರ ತೆಗೆ​ದು​ಕೊ​ಳ್ಳು​ತ್ತದೆ. ಈ ಸಂಬಂಧಿ ಎಲ್ಲಾ ಕಡ​ತ​ಗ​ಳನ್ನು ಪ್ರತ್ಯೇಕ ಮಾಡೋಣ. ಅದನ್ನು ಇಲ್ಲಿ ಚರ್ಚಿ​ಸು​ವುದು ಬೇಡ ಎಂದು ಸೂಚಿದ್ದಾರೆ’ ಎನ್ನುತ್ತವೆ ಮೂಲ​ಗ​ಳು.

ಇದರ ಪರಿ​ಣಾ​ಮವಾಗಿ ಈ ಚರ್ಚೆ​ಗ​ಳಿಗೂ ಮೊದಲೇ ಕಾರ್ಕ​ಳ​ ಕ್ಷೇತ್ರಕ್ಕೆ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಹೆಸ​ರನ್ನು ಸೂಚಿ​ಸ​ಲಾ​ಗಿತ್ತು. ಆಗ ಮಹ​ದೇ​ವಪ್ಪ ಅವ​ರು ಉದ​ಯ​ಕು​ಮಾರ್‌ ಶೆಟ್ಟಿಹಾಗೂ ಇತ​ರ ನಾಯ​ಕರು ಗೋಪಾಲ ಭಂಡಾರಿ ಹೆಸರು ಸೂಚಿ​ಸಿ​ದ್ದರೂ ಪ್ಯಾನೆಲ್‌ ಆಗಿ​ರ​ಲಿಲ್ಲ. ಹರ್ಷ ಮೊಯ್ಲಿ ಹೆಸರು ಮಾತ್ರ ಸೂಚಿ​ತ​ವಾ​ಗಿತ್ತು ಎನ್ನ​ಲಾ​ಗಿದೆ. ಆದರೆ, ಮಹ​ದೇ​ವಪ್ಪ ಅವರ ವಾದದ ಪರಿ​ಣಾ​ಮ​ವಾಗಿ ಈ ಕ್ಷೇತ್ರ ಕೂಡ ಪ್ಯಾನೆಲ್‌ ಆಗಿ ಹೈಕ​ಮಾಂಡ್‌ ಅವ​ಗಾ​ಹ​ನೆಗೆ ಕಳು​ಹಿ​ಸಲು ತೀರ್ಮಾ​ನ​ಗೊಂಡಿದೆ. ಇದು ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರ ಹರ್ಷ ಮೊಯ್ಲಿ ಅವ​ರಿಗೆ ಮಹ​ದೇ​ವಪ್ಪ ವಿರುದ್ಧ ಸಿಟ್ಟು​ಬ​ರಲು ಕಾರಣ ಎನ್ನು​ತ್ತವೆ ಮೂಲ​ಗ​ಳು.

Follow Us:
Download App:
  • android
  • ios