ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಇದೀಗ ಪ್ರಸಿದ್ಧ ನಟರೋರ್ವರು ಬಿಜೆಪಿ ಸೇರಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನವದೆಹಲಿ: ಕೇರಳದಲ್ಲಿ ನೆಲೆ ಸೃಷ್ಟಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಬಿಜೆಪಿ, 2019ರ ಲೋಕಸಭಾ ಚುನಾವಣೆಗೂ ಮೊದಲು, ಖ್ಯಾತ ನಟ ಮೋಹನ್‌ಲಾಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ನಟ ಮೋಹನ್‌ಲಾಲ್ ಮಂಗಳವಾರ ಇಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಇಂಥದ್ದೊಂದು ಸುದ್ದಿಗೆ ಕಾರಣವಾಗಿದೆ. ಮೋಹನ್‌ಲಾಲ್ ಅವರನ್ನು ತಿರುವನಂತಪುರ ಕ್ಷೇತ್ರದಿಂದ ಲೋಕಸಭೆಗೆ ಕಣಕ್ಕೆ ಇಳಿಸಲು ಆರ್‌ಎಸ್‌ಎಸ್ ಕೂಡಾ ಉತ್ಸುಕವಾಗಿದೆ ಎನ್ನಲಾಗಿದೆ.
ಆದರೆ ಮೋದಿ ಭೇಟಿ ಬಳಿಕ ಮೋಹನಲಾಲ್ ಯಾವುದೇ ರಾಜಕೀಯ ವಿಷಯದ ಕುರಿತು ಪ್ರಸ್ತಾಪ ಮಾಡಲಿಲ್ಲ. ತಮ್ಮ ವಿಶ್ವಶಾಂತಿ ಫೌಂಡೇಶನ್ ನಡೆಸುತ್ತಿರುವ ಸಮಾಜ ಸೇವೆಗಳ ಕುರಿತಂತೆ ಮೋದಿಗೆ ವಿವರಿಸಿದೆ. ಜೊತೆಗೆ ಪ್ರವಾಹಪೀಡಿತ ನವ ಕೇರಳ ನಿರ್ಮಾಣಕ್ಕೆ ಪರಿಹಾರ ಕಂಡುಕೊಳ್ಳುವ ‘ಜಾಗತಿಕ ಮಲೆಯಾಳಿ ದುಂಡು ಮೇಜಿನ ಸಭೆ’ ಆಯೋಜಿಸಿದ್ದು, ಅದರಲ್ಲಿ ಭಾಗವಹಿಸುವಂತೆ ಪ್ರಧಾನಿಗೆ ಆಹ್ವಾನ ನೀಡಿದೆ. ಈ ವೇಳೆ ಕೇರಳ ಪುನರ್‌ನಿರ್ಮಾಣಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಮೋದಿ ಭರವಸೆ ನೀಡಿದರು ಎಂದು ಮೋಹನ್‌ಲಾಲ್ ತಿಳಿಸಿದ್ದಾರೆ.
