‘ಮೋದಿ ಕೇರ್‌’ನಲ್ಲಿ ಸಿಸೇರಿಯನ್‌ ಹೆರಿಗೆಗೆ ಕೇವಲ 9 ಸಾವಿರ ರು.!

Modicare to offer 20% lower rates than CGHS rates
Highlights

50 ಕೋಟಿ ನಾಗರಿಕರಿಗೆ ಆರೋಗ್ಯ ವಿಮೆ ಒದಗಿಸುವ ವಿಶ್ವದಲ್ಲೇ ಮೊದಲನೆಯದಾದ ಸರ್ಕಾರಿ ಕಾರ್ಯಕ್ರಮ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ಯನ್ನು ಸ್ವಾತಂತ್ರ್ಯ ದಿನವಾದ ಆ.15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ  ನಿರೀಕ್ಷೆ ಇದೆ. 

ನವದೆಹಲಿ: 50 ಕೋಟಿ ನಾಗರಿಕರಿಗೆ ಆರೋಗ್ಯ ವಿಮೆ ಒದಗಿಸುವ ವಿಶ್ವದಲ್ಲೇ ಮೊದಲನೆಯದಾದ ಸರ್ಕಾರಿ ಕಾರ್ಯಕ್ರಮ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ಯನ್ನು ಸ್ವಾತಂತ್ರ್ಯ ದಿನವಾದ ಆ.15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ ನಿರೀಕ್ಷೆ ಇದೆ. ‘ಮೋದಿ ಕೇರ್‌’ ಎಂದೂ ಕರೆಯಲಾಗುವ ಈ ಯೋಜನೆಯಲ್ಲಿ ಕೆಲವೊಂದು ಚಿಕಿತ್ಸೆಗಳು ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರ ಚಿಕಿತ್ಸೆಗಾಗಿ ರೂಪಿಸಲಾಗಿರುವ ‘ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ’ಯಲ್ಲಿನ ದರಕ್ಕಿಂತ ಶೇ.15ರಿಂದ ಶೇ.20ರಷ್ಟುಕಡಿಮೆ ಇರಲಿವೆ.

ಈ ದರ ಇಳಿಕೆ ಕ್ರಮದಿಂದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬೆಲೆ ನಿಗದಿ ಮಾನದಂಡವೊಂದು ಸೃಷ್ಟಿಯಾಗಲಿದ್ದರೆ, ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದುಬಾರಿ ಶುಲ್ಕ ತಗ್ಗಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.

ಆರೋಗ್ಯ ಸಚಿವಾಲಯ ‘ಮೋದಿ ಕೇರ್‌’ ಯೋಜನೆಯಡಿ ಈಗಾಗಲೇ 1354 ಚಿಕಿತ್ಸಾ ಪ್ಯಾಕೇಜ್‌ಗಳನ್ನು ಅಂತಿಮಗೊಳಿಸಿದೆ. ಅದರಲ್ಲಿ ಹೃದ್ರೋಗ, ನೇತ್ರ ಸಮಸ್ಯೆ, ಮೂಳೆ ಸಮಸ್ಯೆ, ಮೂತ್ರಕೋಶ ತೊಂದರೆ ಹಾಗೂ ಕ್ಯಾನ್ಸರ್‌ನಂತಹ 23 ಕಾಯಿಲೆಗಳೂ ಬರುತ್ತವೆ. ಒಂದು ಸ್ಟೆಂಟ್‌ ಅಳವಡಿಕೆ ಒಳಗೊಂಡ ಆ್ಯಂಜಿಯೋಪ್ಲಾಸ್ಟಿಗೆ 50 ಸಾವಿರ, ಎರಡು ಸ್ಟಂಟ್‌ಗಳಿಗೆ 65 ಸಾವಿರ, ಮಂಡಿ ಚಿಪ್ಪುಗಳ ಬದಲಾವಣೆಗೆ 80 ಸಾವಿರ, ಸಿಸೇರಿಯನ್‌ ಹೆರಿಗೆಗೆ 9 ಸಾವಿರ ರು. ದರ ನಿಗದಿಗೊಳಿಸಲಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುತ್ತಿರುವ ಚಿಕಿತ್ಸಾ ದರಕ್ಕಿಂತ ಶೇ.15ರಿಂದ ಶೇ.20ರಷ್ಟುಕಡಿಮೆ.

ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಆ್ಯಂಜಿಯೋಪ್ಲಾಸ್ಟಿಗೆ 1.5ರಿಂದ 2 ಲಕ್ಷ, ಸಿಸೇರಿಯನ್‌ ಹೆರಿಗೆಗೆ 1.5 ಲಕ್ಷ, ಮಂಡಿ ಚಿಪ್ಪು ಬದಲಾವಣೆಗೆ 3.5 ಲಕ್ಷ ರು. ಪಾವತಿಸಬೇಕಾಗಿದೆ. ಅದಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರ ನಿಗದಿಪಡಿಸುತ್ತಿರುವ ದರ ತುಂಬಾ ಅಗ್ಗವಿದೆ. ದರಪಟ್ಟಿಒಳಗೊಂಡ 205 ಪುಟಗಳ ಕರಡನ್ನು ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ರವಾನಿಸಿದೆ. ಇದು ಜಾರಿಗೆ ಬಂದರೆ, ದರ ಇಳಿಕೆ ಮಾಡುವಂತಹ ಒತ್ತಡ ಖಾಸಗಿ ಆಸ್ಪತ್ರೆಗಳ ಮೇಲೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

loader