ಪ್ರಧಾನಿ ನರೇಂದ್ರ ಮೋದಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಿದರು.

ಮಂಗಳೂರು(ಅ.28): ಪ್ರಧಾನಿ ನರೇಂದ್ರ ಮೋದಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಿದರು.

"ನಮೋ ಮಂಜುನಾಥ .... ನಿಮಗೆಲ್ಲರಿಗೂ ಅಭಿನಂದನೆಗಳು " ಎಂದು ಕನ್ನಡದಲ್ಲೇ ತಮ್ಮ ಭಾಷಣ ರಂಭಿಸಿದ ಮೋದಿ, "ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ "ಎಂದು ಬಣ್ಣಿಸಿದರು.ಅಲ್ಲದೇ "ಕಳೆದ ವಾರ ಆಧಿಶಂಕರರು ಸ್ಥಾಪಿಸಿದ್ದ ಕೇದರನಾಥ್ ದರ್ಶನ ಪಡೆದಿದ್ದೆ. ಇಂದು ದಕ್ಷಿಣದ ಮಂಜುನಾಥನ ದರ್ಶನದ ಅವಕಾಶ ಸಿಕ್ಕಿದೆ. ನನ್ನಂತ ಸಾಮಾನ್ಯ ವ್ಯಕ್ತಿಗೆ ನೀವು ಸನ್ಮಾನ ಮಾಡಿದ್ದೀರಿ.ನಿಮ್ಮಂತಹ ಮಹಾನ್ ತಪಸ್ವಿಯ ಮುಂದೆ ನಾನು ಚಿಕ್ಕವನು. ನಿಮ್ಮ ಸಾಧನೆ ನಮಗೆಲ್ಲರಿಗೂ ಪ್ರೇರಣೆ ವಿಷಯ" ಎಂದು ಡಾ. ವೀರೇಂದ್ರ ಹೆಗ್ಗಡೆಯವರನ್ನು ಶ್ಲಾಘಿಸಿದರು.

ಅಲ್ಲದೇ "ಕೇಂದ್ರದ ಕೌಶಲ್ಯಾಭಿವದ್ಧಿ ಕಾರ್ಯಕ್ರಮಕ್ಕೆ ಹೆಗ್ಗಡೆಯವರೇ ಪ್ರೇರಣೆಯಾಗಿದ್ದಾರೆ. ಅವರ ತತ್ವವನ್ನೇ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಲಾಗಿದೆ. ಅವರು ಸಣ್ಣ ವಯಸ್ಸಿನಿಂದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 50 ವರ್ಷಗಳಿಂದ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಅವರ ಸಾಧನೆ ದೊಡ್ಡದು" ಎಂದು ಕೊಂಡಾಡಿದರು.

ಬಳಿಕ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ಮೋದಿಗೆ ಪೈಸೂರು ಪೇಟಾ ತೊಡಿಸಿ, ಸರಸ್ವತಿಯ ವಿಗ್ರಹ ನೀಡಿ ಸಾಂಪ್ರದಾಯಿಕವಾಗಿ ಗೌರವಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರು. ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಿದರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ಅನಂತ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ವಸಂತ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.