ಭಾಷಣದ ಮಧ್ಯೆ ಭಾವುಕರಾಗಿ ಕಣ್ಣೀರು ಸುರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರ ಬದಲಾಗಿ ಜನಸಾಮಾನ್ಯರ ಕಣ್ಣೀರು ಒರೆಸುವತ್ತ ಮೋದಿ ಗಮನ ಹರಿಸಬೇಕು ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ (ನ.24): ನೋಟು ನಿಷೇಧಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ವಿರುದ್ಧ ಶಿವಸೇನೆಯು ಟೀಕಾಪ್ರಹಾರ ಮುಂದುವರೆಸಿದೆ. ದೊಡ್ಡ ಮುಖಬೆಲೆಯ ನೋಟುಗಳನ್ನು ಅಪಮೌಲ್ಯೀಕರಿಸುವ ಮುಂಚೆ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ತಜ್ಞರಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜತೆ ಸಮಾಲೋಚನೆ ನಡೆಸಬೇಕಿತ್ತು ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಸಿದ್ಧ ಅರ್ಥಶಾಸ್ತ್ರಜ್ಞರೂ ಹೌದು. ನರೇಂದ್ರ ಮೋದಿ ಅಪಮೌಲ್ಯೀಕರಣ ಕ್ರಮದ ಬಗ್ಗೆ ಮನಮೋಹನ್ ಸಿಂಗ್’ರ ಅಭಿಪ್ರಾಯವನ್ನು ಪಡೆಯಬೇಕಿತ್ತು, ಎಂದು ಠಾಕ್ರೆ ಹೇಳಿದ್ದಾರೆ.

ಭಾಷಣದ ಮಧ್ಯೆ ಭಾವುಕರಾಗಿ ಕಣ್ಣೀರು ಸುರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರ ಬದಲಾಗಿ ಜನಸಾಮಾನ್ಯರ ಕಣ್ಣೀರು ಒರೆಸುವತ್ತ ಮೋದಿ ಗಮನ ಹರಿಸಬೇಕು ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟು ನಿಷೇಧಿಸುವ ಕ್ರಮವನ್ನು ಘೋಷಿಸುವ ಮೊದಲು ಮತಹಾಕಿದ ದೇಶದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಸರ್ಕಾರದ ಉದ್ದೇಶ ಒಳ್ಳೆಯದಿರಬಹುದು, ಆದರೆ ಇಷ್ಟೊಂದು ಕಳಪೆಯಾಗಿ ಜಾರಿಗೊಳಿಸುವ ಹಿಂದಿನ ಉದ್ದೇಶವೇನು? ಕಪ್ಪು-ಹಣದ ಜತೆಗೆ ಕಪ್ಪು-ಉದ್ದೇಶವೇನಾದರೂ ಇದೆಯೇ? ಎಂದು ಉದ್ಧವ್ ಠಾಕ್ರೆ ಹರಿಹಾಯ್ದಿದ್ದಾರೆ.