ಭೋಪಾಲ್‌: ಹೊಸ ಮನೆ ನಿರ್ಮಿಸಿದಾಗ, ಅಂದವಾಗಿ ಕಾಣಲೆಂದು ಸುಂದರವಾದ ದೇವರ ಫೋಟೋ ಅಥವಾ ಇನ್ಯಾವುದೇ ಮಾದರಿಯ ಟೈಲ್ಸ್‌ ಹಾಕುವುದು ಸಹಜ.

ಆದರೆ ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ಪಿಎಂಎವೈ) ಯಡಿ ಮನೆ ನಿರ್ಮಿಸುವವರು, ತಮ್ಮ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಅವರ ಫೋಟೋ ಇರುವ ಟೈಲ್ಸ್‌ ಹಾಕುವುದು ಕಡ್ಡಾಯ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲ ಪಿಎಂಎವೈ ಮನೆಗಳ ಪ್ರವೇಶ ದ್ವಾರ ಮತ್ತು ಅಡುಗೆ ಮನೆಯಲ್ಲಿ ಇಬ್ಬರು ನಾಯಕರ ಫೋಟೋ ಇರುವುದನ್ನು ನೋಡಿಕೊಳ್ಳುವಂತೆ ಎಲ್ಲ ಸ್ಥಳೀಯಾಡಳಿತ ಆಯುಕ್ತರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಗರಾಡಳಿತ ಇಲಾಖೆ ಆದೇಶ ಜಾರಿಗೊಳಿಸಿದೆ. ಆದೇಶ ಪತ್ರದೊಂದಿಗೆ ಸೆರಾಮಿಕ್‌ ಟೈಲ್ಸ್‌ನ ವಿನ್ಯಾಸ ಮಾದರಿಯನ್ನೂ ಕಳುಹಿಸಲಾಗಿದೆ.

ಟೈಲ್ಸ್‌ನಲ್ಲಿ ಪ್ರಧಾನಿ ಮತ್ತು ಸಿಎಂ ಫೋಟೊಗಳು ಇರಬೇಕು ಮತ್ತು ಅದರಲ್ಲಿ ‘ಸಬ್‌ ಕಾ ಸಪ್ನಾ, ಘರ್‌ ಹೋ ಅಪ್ನಾ’ ಎಂಬ ವಾಕ್ಯದೊಂದಿಗೆ ಪಿಎಂಎವೈ ಲಾಂಛನ ಕೂಡ ಮುದ್ರಿಸಿರಬೇಕು.