ದೇಶವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಮತ್ತೊಂದು ರೂಪ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಸೆ.15ರಂದು ಚಾಲನೆ ಸಿಕ್ಕಿದೆ. ಉದ್ಯಮಿ ರತನ್ ಟಾಟಾ, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿ ಅನೇಕ ಗಣ್ಯರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಹೊಸದಿಲ್ಲಿ: ಭಾರತದ ಸ್ವಚ್ಛತೆಗಾಗಿ ಪ್ರಧಾನಿ ಮೋದಿ ಉದ್ಘಾಟಿಸಿರುವ 'ಸ್ವಚ್ಛತೆಯೇ ಸೇವೆ' ಎಂಬ ಹೊಸ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರ ನಟರು, ಆಧ್ಯಾತ್ಮಿಕ ಗುರುಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಪತ್ರ ಬರೆದು, ಬೆಂಬಲ ಕೋರಿರುವ ಮೋದಿ, ಈ ಅಭಿಯಾನದಲ್ಲಿ ಎಲ್ಲರನ್ನೂ ಭಾಗಿಯಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಸ್ವಚ್ಛ ಭಾರತ ಅಭಿಯಾನಕ್ಕೆ ರಾಯಭಾರಿಯಾಗಿರುವ ಬಾಲಿವುಡ್ ಬಿಗ್ ಬಿ ಈ ಅಭಿಯಾನದಲ್ಲಿಯೂ ಕೈ ಜೋಡಿಸುತ್ತಿದ್ದು, ಆಧ್ಯಾತ್ಮಿಕ ಗುರುಗಳಾದ ಆರ್ಟ್ ಲಿವಿಂಗ್‌ನ ಶ್ರೀ ರವಿಶಂಕರ್, ಮಾತಾ ಅಮೃತನಂದಾ ಮಾ, ಜಗ್ಗಿ ವಾಸುದೇವ್, ಉದ್ಯಮಿ ರತನ್ ಟಾಟಾ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈಗಾಗಲೇ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ದೇಶದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿರುವ, ಭಾಗಿಯಾಗುತ್ತಿರುವ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದು, ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಹಲವು ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಶ್ರಮದಾನ ಮಾಡುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ರತನ್ ಟಾಟಾ ಹೇಳಿದ್ದೇನು?
ಮೋದಿ ಅವರೊಂದಿಗೆ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಚಾಲನೆ ನೀಡಿದ ಉದ್ಯಮಿ ರತನ್ ಟಾಟಾ, 'ಈ ಯೋಜನೆಯಲ್ಲಿ ಕೈ ಜೋಡಿಸಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಸದೃಢ ಭಾರತದ ಗುಟ್ಟು ಜನರ ಆರೋಗ್ಯದಲ್ಲಿದೆ. ಎಲ್ಲಿ ಸ್ವಚ್ಛತೆ ಇದೆಯೋ, ಅಲ್ಲಿ ಆರೋಗ್ಯ ಇರಲಿದೆ,' ಎಂದು ಹೇಳಿದ್ದಾರೆ.
ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ, 'ಖಾಸಗೀ ಕ್ಷೇತ್ರ ಈ ಕಾರ್ಯದಲ್ಲಿ ಕೈ ಜೋಡಿಸುವುದು ಅತ್ಯಗತ್ಯವಾಗಿದ್ದು, ಆಗ ಮಾತ್ರ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲಿದೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯ ಉದ್ದೇಶವೇನು?
- ಗ್ರಾಮೀಣ ಭಾರತವನ್ನು 2019ರ ಅ.2ರ ಒಳಗಾಗಿ ಸ್ವಚ್ಛ, ಬಯಲು ಶೌಚ ಮುಕ್ತಗೊಳಿಸುವುದು.
- ಸ್ವಚ್ಛತೆ, ನೈರ್ಮಲ್ಯದ ಮೂಲಕ ಗ್ರಾಮೀಣ ಪ್ರದೇಶಗಲ್ಲಿ ಸಾಮಾನ್ಯ ಜೀವನ ಮಟ್ಟ ಸುಧಾರಣೆ
- ಸುಸ್ಥಿರ ನೈರ್ಮಲ್ಯ ವ್ಯವಸ್ಥೆ ಅಳವಡಿಕೆಗೆ ಸಮುದಾಯಗಳಿಗೆ ಉತ್ತೇಜನ.
- ಪರಿಸರ ಸ್ನೇಹಿ, ಸುಸ್ಥಿರ ನೈರ್ಮಲ್ಯಕ್ಕಾಗಿ ಕಡಿಮೆ ವೆಚ್ಚದ ತಂತ್ರಜ್ಞಾನದ ಬಳಕೆ.
- ವೈಜ್ಞಾನಿಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ.
- ಸಮಾಜದ ಕೆಳ ಸ್ಥರಗಳಲ್ಲಿ ನೈರ್ಮಲ್ಯದ ಮೂಲಕ ಸಾಮಾಜಿಕ ಒಳಗೊಳ್ಳುವಿಕೆ ಉತ್ತೇಜನ.
