ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ತಿರುಗೇಟು ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ‘ಪ್ರಧಾನಿ ಮೋದಿ ನಿಜವಾದ ರಾವಣ, ಸಿದ್ದರಾಮಯ್ಯ ಶ್ರೀರಾಮ’ ಎಂದು ಬಣ್ಣಿಸಿದರು.
ಚಿತ್ರದುರ್ಗ/ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ತಿರುಗೇಟು ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ‘ಪ್ರಧಾನಿ ಮೋದಿ ನಿಜವಾದ ರಾವಣ, ಸಿದ್ದರಾಮಯ್ಯ ಶ್ರೀರಾಮ’ ಎಂದು ಬಣ್ಣಿಸಿದರು.
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸೋಮವಾರ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಸಚಿವ ಅನಂತಕುಮಾರ್ ಅವರು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿದ್ದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ದೇಶದ ಸದ್ಯದ ಪರಿಸ್ಥಿತಿಯಲ್ಲಿ ರಾವಣ ಯಾರು ಎಂಬುದು ಗೊತ್ತಾಗಿದೆ.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ರೀತಿ ಕನಸು ಕಾಣುತ್ತಲೇ ಬಿಜೆಪಿಯವರು ಖುಷಿ ಅನುಭವಿಸುತ್ತಿದ್ದಾರೆ. ಆಧಾರರಹಿತವಾಗಿ ಮಾತನಾಡುವುದು ಯಡಿಯೂರಪ್ಪ ಅವರ ಚಾಳಿ ಎಂದು ಇದೇ ವೇಳೆ ದೂರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಮತ್ತೊಂದು ಅವಧಿಗೆ ಅಧಿಕಾರ ನಡೆಸುತ್ತದೆ. ಬಿಜೆಪಿ ಏನೇ ಸರ್ಕಸ್ ನಡೆಸಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಎಲ್ಲ ಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.
ಬೂತ್ ಕಮಿಟಿ ರಚನೆ ಹಾಗೂ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಗಳ ಖುದ್ದು ಅವಲೋಕಿಸಲು ತಾವು ರಾಜ್ಯ ಪ್ರವಾಸ ಕೈಗೊಂಡಿದ್ದೇವೆ ಎಂದು ತಿಳಿಸಿದರು.
