ಹ್ಯಾಂಗ್ ಜೌ(ಸೆ.06): ದಕ್ಷಿಣ ಏಷ್ಯಾದ ಒಂದು ದೇಶ ತನ್ನ ಏಜೆಂಟ್ ಗಳ ಮೂಲಕ ವಿಶ್ವದಲ್ಲಿ ಭಯೋತ್ಪಾದನೆಯನ್ನು ಪಸರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.
ಚೀನಾದ ಹ್ಯಾಂಗ್ ಜೌ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಏಷ್ಯಾದ ಒಂದು ದೇಶ ತನ್ನ ಏಜೆಂಟ್ ಗಳ ಮೂಲಕ ವಿಶ್ವದಲ್ಲಿ ಭಯೋತ್ಪಾದನೆಯನ್ನು ಪಸರಿಸುತ್ತಿದೆ ಎಂದು ಹೇಳಿದರು.
ಜಿ 20 ಶೃಂಗದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪ್ರತ್ಯೇಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು. ಅಂತೆಯೇ ಉಗ್ರರಿಗೆ ಹಣಕಾಸು ಮತ್ತಿತರ ನೆರವು ನೀಡುತ್ತಿರುವವರ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳಬೇಕಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.
