ಈ ಪ್ರದೇಶದಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುವ ಈ ಸುರಂಗ ಮಾರ್ಗದಿಂದ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ. ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿ 2ಗಂಟೆಯಷ್ಟು ಕಡಿಮೆಯಾಗಲಿದೆ.

ಶ್ರೀನಗರ(ಏ. 02): ಪ್ರತ್ಯೇಕತಾವಾದಿಗಳ ತೀವ್ರ ಪ್ರತಿಭಟನೆ ನಡುವೆಯೂ ಕಾಶ್ಮೀರ ಕಣಿವೆಯಲ್ಲಿ ಪ್ರಧಾನಿ ಮೋದಿ ಇಂದು ದೇಶದ ಅತ್ಯಂತ ಉದ್ದದ ಸುರಂಗ ಮಾರ್ಗದ ಉದ್ಘಾಟನೆ ನೆರವೇರಿಸಿದರು. ಜಮ್ಮು-ಶ್ರೀನಗರ ಹೆದ್ದಾರಿಯ ಉಧಾಮ್'ಪುರ್ ಮತ್ತು ರಂಬನ್ ನಡುವಿರುವ ಚೆನಾನಿ-ನಾಶರಿ ಸುರಂಗವನ್ನು ಇಂದು ಮಧ್ಯಾಹ್ನ 3ಗಂಟೆಗೆ ಲೋಕಾರ್ಪಣೆಗೊಳಿಸಲಾಗಿದೆ. ಉದ್ಘಾಟನೆ ವೇಳೆ, ಪ್ರಧಾನಿ ಮೋದಿ ಜೊತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಉಪಸ್ಥಿತರಿದ್ದರು.

9.2 ಕಿಮೀ ಉದ್ದದ ಈ ಸುರಂಗ ಮಾರ್ಗವನ್ನು 2,500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಐಎಲ್ ಅಂಡ್ ಎಫ್'ಎಸ್ ಎಂಬ ಸಂಸ್ಥೆ ಕೇವಲ ಐದೂವರೆ ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿದ್ದು ದಾಖಲೆಯಾಗಿದೆ.

ಈ ಪ್ರದೇಶದಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುವ ಈ ಸುರಂಗ ಮಾರ್ಗದಿಂದ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ. ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿ 2ಗಂಟೆಯಷ್ಟು ಕಡಿಮೆಯಾಗಲಿದೆ. 30 ಕಿ.ಮೀ.ನಷ್ಟು ಅಂತರ ಕಡಿಮೆಯಾಗಲಿದೆ. ಇದರಿಂದ ರಾಜ್ಯಕ್ಕೆ ಪ್ರತೀ ದಿನ ಲಕ್ಷಾಂತರ ರೂಪಾಯಿ ಮಿಗಲಿದೆ. ವಿಶ್ವದ ಅತ್ಯುತ್ಕೃಷ್ಟ ತಂತ್ರಜ್ಞಾನದಿಂದ ರಚಿಸಲಾಗಿರುವ ಈ ಸುರಂಗದಿಂದ ಕಣಿವೆ ರಾಜ್ಯದ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಇದೇ ವೇಳೆ, ಸುರಂಗ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವುದನ್ನು ವಿರೋಧಿಸಿ ಕಾಶ್ಮೀರದ ಕೆಲವೆಡೆ ಪ್ರತ್ಯೇಕತಾವಾದಿಗಳು ತೀವ್ರ ಪ್ರತಿಭಟನೆ ನಡೆಸಿದರು.