Asianet Suvarna News Asianet Suvarna News

ಫೆ.1ರೊಳಗೆ ರೈತರಿಗೆ ಭರ್ಜರಿ ಪ್ಯಾಕೇಜ್‌?

ಬಡ್ಡಿರಹಿತ, ಖಾತ್ರಿರಹಿತ ಸಾಲ, ಜತೆಗೆ ಪ್ರತಿ ತಿಂಗಳೂ ಆದಾಯ| ಫೆ.1ರ ಬಜೆಟ್‌ ಅಥವಾ ಅದಕ್ಕೂ ಮುನ್ನವೇ ಘೋಷಣೆ ಸಂಭವ

Modi Govt Likely To Announce Loan and Income Scheme For Farmers
Author
New Delhi, First Published Jan 16, 2019, 10:38 AM IST

ಮುಂಬೈ/ನವದೆಹಲಿ[ಜ.16]: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ದೇಶದ ರೈತ ಸಮುದಾಯದ ಓಲೈಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಇನ್ನು 2 ವಾರಗಳಲ್ಲಿ ಭರ್ಜರಿ ಪ್ಯಾಕೇಜ್‌ವೊಂದನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ರೈತರಿಗೆ ಬಡ್ಡಿರಹಿತವಾಗಿ ಸಾಲ, ಖಾತ್ರಿರಹಿತವಾಗಿ ಸಾಲ ಮಂಜೂರು ಹಾಗೂ ಪ್ರತಿ ವರ್ಷ ಇಷ್ಟುಸಾವಿರ ಎಂದು ಆದಾಯ ನೀಡುವ ಯೋಜನೆಗಳು ಈ ಪ್ಯಾಕೇಜ್‌ನ ಭಾಗವಾಗಿರಲಿವೆ. ಫೆ.1ರಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಲಿರುವ ಮಧ್ಯಂತರ ಬಜೆಟ್‌ ಅಥವಾ ಅದಕ್ಕೂ ಮುನ್ನವೇ ಈ ಪ್ಯಾಕೇಜ್‌ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ತಾನು ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿರುವ ಕಾಂಗ್ರೆಸ್‌, ಲೋಕಸಭೆ ಚುನಾವಣೆಯಲ್ಲೂ ಅದೇ ಭರವಸೆ ನೀಡುವುದು ಪಕ್ಕಾ ಆಗಿದೆ. ಆದರೆ ಸಾಲ ಮನ್ನಾಕ್ಕೆ ಸರ್ಕಾರಕ್ಕೆ ಮನಸ್ಸಿಲ್ಲ. ಎಲ್ಲ ರೈತರಿಗೂ ನೆರವಾಗುವ ಬದಲು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಮಾತ್ರ ಸಹಾಯಹಸ್ತ ಚಾಚುವ ದೃಷ್ಟಿಯಿಂದ ಪ್ಯಾಕೇಜ್‌ ತಯಾರಿಸುತ್ತಿರುವುದು ಸ್ಪಷ್ಟವಾಗಿದೆ.

ಸಕಾಲಕ್ಕೆ ಸಾಲ ಮರುಪಾವತಿಸುವ ರೈತರಿಗೆ ಕೇಂದ್ರ ಸರ್ಕಾರ ಈಗಾಗಲೇ ಬಡ್ಡಿ ರಿಯಾಯಿತಿ ಒದಗಿಸುತ್ತಿದೆ. ಆದರೆ 3 ಲಕ್ಷ ರು.ವರೆಗಿನ ಸಾಲಕ್ಕೆ ಯಾವುದೇ ಬಡ್ಡಿ ವಿಧಿಸದೇ ಇರುವ ನಿಟ್ಟಿನಲ್ಲಿ ಇದೀಗ ಮನಸ್ಸು ಮಾಡಿದೆ. ಇದರಿಂದ ಆಗುವ ನಷ್ಟವನ್ನು ಸರ್ಕಾರ ಭರಿಸಿದರೆ ಬ್ಯಾಂಕುಗಳೂ ಸಮ್ಮತಿ ಸೂಚಿಸಲಿವೆ. ಬಡ್ಡಿರಹಿತ ಸಾಲ ಸೌಲಭ್ಯವನ್ನು ಎಲ್ಲ ರೈತರಿಗೂ ವಿಸ್ತರಿಸಬೇಕೋ ಅಥವಾ ಸಕಾಲಕ್ಕೆ ಸಾಲ ಮರುಪಾವತಿ ಮಾಡುವವರಿಗೆ ಮಾತ್ರ ಕೊಡಬೇಕೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ 2ರಿಂದ 3 ಲಕ್ಷ ರು.ಗಳಷ್ಟುಸಾಲವನ್ನು ಖಾತ್ರಿರಹಿತವಾಗಿ ನೀಡುವ ಆಲೋಚನೆ ಸರ್ಕಾರದ ಮುಂದಿದೆ. ಆದರೆ, ನೀಡಲಾಗುವ ಸಾಲಕ್ಕೆ ಸೂಕ್ತ ಖಾತ್ರಿ ವ್ಯವಸ್ಥೆ ರೂಪಿಸದ ಹೊರತಾಗಿ ಇದಕ್ಕೆ ಬ್ಯಾಂಕುಗಳು ಒಪ್ಪಿಗೆ ನೀಡುವ ಸಂಭವ ಕಡಿಮೆ ಇದೆ. ಸರ್ಕಾರ ಬ್ಯಾಂಕುಗಳಿಗೆ ಭರವಸೆ ನೀಡಿದರೆ ಈ ಯೋಜನೆ ಜಾರಿಗೆ ಯಾವುದೇ ಸಮಸ್ಯೆ ಆಗದು ಎನ್ನಲಾಗುತ್ತಿದೆ.

ಇದೇ ವೇಳೆ, ತೆಲಂಗಾಣ ಮಾದರಿಯಲ್ಲಿ ವರ್ಷಕ್ಕೆ ಇಂತಿಷ್ಟುಸಾವಿರ ಎಂದು ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ಬಗ್ಗೆ ಚಿಂತನೆಯಲ್ಲಿದ್ದ ಸರ್ಕಾರ, ಅದನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ. ಇದಕ್ಕೆ ಪುಷ್ಟಿನೀಡುವಂತೆ, ರೈತರ ಸಾಲ ಮನ್ನಾ ಎಂಬುದು ಸಮಸ್ಯೆಗೆ ಪರಿಹಾರವಲ್ಲ. ರೈತರ ಆದಾಯವನ್ನೇ ಹೆಚ್ಚಿಸಬೇಕಾಗಿದೆ. ಅಖಿಲ ಭಾರತ ಮಟ್ಟದಲ್ಲಿ ರೈತರಿಗೆ ಆದಾಯ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕಾಗಿದೆ. ವಾರ್ಷಿಕ ಎರಡು ಕಂತುಗಳಲ್ಲಿ 12 ಸಾವಿರ ರು. ನೀಡಿದರೆ 21.6 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ 50 ಸಾವಿರ ಕೋಟಿ ರು. ಹೊರೆಬೀಳಲಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕೂಡ ಸಲಹಹೆ ಮಾಡಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios