ನವದೆಹಲಿ :  ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಡುವಣ ಸಮರ ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಆರ್‌ಬಿಐಗೆ ಬಿಸಿ ಮುಟ್ಟಿಸಲು ಈ ಹಿಂದಿನ ಯಾವ ಸರ್ಕಾರಗಳೂ ಬಳಸದ ಕಾಯ್ದೆಯೊಂದನ್ನು ಸರ್ಕಾರ ಪ್ರಯೋಗಿಸಿದೆ.

ತನ್ನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಿಸರ್ವ್ ಬ್ಯಾಂಕ್‌ಗೆ ತಾಕೀತು ಮಾಡಲು ಆರ್‌ಬಿಐ ಕಾಯ್ದೆಯ ಒಂದು ಸೆಕ್ಷನ್‌ನಡಿ ಸರ್ಕಾರಕ್ಕೆ ಅವಕಾಶವಿದೆ. ಆ ಸೆಕ್ಷನ್‌ನಲ್ಲಿನ ಪರಿಣಾಮಕಾರಿಯಲ್ಲದ ಭಾಗ ಬಳಸಿಕೊಂಡು ಸರ್ಕಾರ ಈಗ ಆರ್‌ಬಿಐಗೆ ಮೂರು ಪತ್ರಗಳನ್ನು ಬರೆದಿದೆ. ಕಗ್ಗಂಟಾಗಿರುವ ವಿಷಯಗಳನ್ನು ಬಗೆಹರಿಸಿಕೊಳ್ಳಲು ಸಮಾಲೋಚನೆ ಆರಂಭಿಸುವಂತೆ ಸೂಚನೆ ನೀಡಿದೆ. ಆರ್‌ಬಿಐ ಏನಾದರೂ ಮಣಿಯದೇ ಇದ್ದರೆ, ಆರ್‌ಬಿಐ ಕಾಯ್ದೆಯ ಕಠಿಣ ಭಾಗ ಬಳಸುವ ಸಾಧ್ಯತೆ ಇದೆ. ಹಾಗಾದಲ್ಲಿ ರಿಸರ್ವ್ ಬ್ಯಾಂಕ್‌ ಕೇಂದ್ರದ ತಾಳಕ್ಕೆ ಕುಣಿಯಲೇಬೇಕಾಗುತ್ತದೆ.

ಏನಿದು ಬ್ರಹ್ಮಾಸ್ತ್ರ?: 

ಆರ್‌ಬಿಐ ಒಂದು ಸ್ವಾಯತ್ತ ಸಂಸ್ಥೆ. ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಒಂದು ವೇಳೆ ಆರ್‌ಬಿಐ ತಾನು ಹೇಳಿದಂತೆ ಕೇಳಬೇಕು ಎಂದು ಸರ್ಕಾರಕ್ಕೆ ಅನ್ನಿಸಿದರೆ, ಅದಕ್ಕಾಗಿ ಆರ್‌ಬಿಐ ಕಾಯ್ದೆಯಡಿ ಒಂದು ಅಂಶವಿದೆ. ಅದೇ ಸೆಕ್ಷನ್‌ 7 (1). ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸೆಕ್ಷನ್‌ 7 (1) ಬಳಸಿಕೊಂಡು ಆರ್‌ಬಿಐಗೆ ಸರ್ಕಾರ ನಿರ್ದೇಶನಗಳನ್ನು ನೀಡಬಹುದು. ಅದನ್ನು ಆರ್‌ಬಿಐ ಜಾರಿಗೆ ತರಲೇಬೇಕಾಗುತ್ತದೆ. ಯಾವುದೇ ಸ್ವಾಯತ್ತ ಸಂಸ್ಥೆಗೂ ಸಹ್ಯವಾಗದ ಸೂಚನೆ ಇದು.

ಸೆಕ್ಷನ್‌ 7(1)ರಡಿ ಎರಡು ಭಾಗಗಳಿವೆ. ಒಂದು- ಸಮಾಲೋಚನೆಗೆ ಆಹ್ವಾನಿಸುವುದು. ಎರಡು- ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರವೇ ಸೂಚನೆ ಕೊಡುವುದು. 1991ರಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ, 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಕಂಡು ಬಂದಾಗ ಸೇರಿದಂತೆ ಹಿಂದಿನ ಯಾವುದೇ ಸರ್ಕಾರಗಳೂ ಆರ್‌ಬಿಐಗೆ ನೇರ ತಾಕೀತು ಮಾಡುವ ಸೆಕ್ಷನ್‌ 7(1) ಬಳಸಿರಲಿಲ್ಲ. ಆದರೆ ಸೆಕ್ಷನ್‌ 7(1)ರಡಿ ಮೊದಲ ಭಾಗವನ್ನು ಬಳಸಿಕೊಂಡು ಸರ್ಕಾರ ಕೆಲವು ವಾರಗಳ ಹಿಂದೆ ಮೂರು ಪತ್ರಗಳನ್ನು ಬರೆದಿದೆ. ಬ್ಯಾಂಕುಗಳ ವಿತ್ತೀಯ ಆರೋಗ್ಯ ಕಾಯ್ದುಕೊಳ್ಳುವ ಸುಧಾರಣಾ ಕ್ರಮದಿಂದ ಹಿಡಿದು ಹಣದ ಹರಿವಿನವರೆಗೆ ಕೆಲವೊಂದು ವಿಚಾರಗಳನ್ನು ಪ್ರಸ್ತಾಪಿಸಿದೆ.

ಈ ವಿಚಾರಗಳಲ್ಲಿ ಸಮಾಲೋಚನೆ ನಡೆಸುವಂತೆ ನಿರ್ದೇಶಿಸಿದೆ. ಆದರೆ ಇದು ಕಠಿಣ ಕ್ರಮವೇನಲ್ಲ. ಇದಕ್ಕೂ ಆರ್‌ಬಿಐ ಬಗ್ಗದೇ ಹೋದರೆ ಸೆಕ್ಷನ್‌ 7(1)ರ ಎರಡನೇ ಭಾಗ, ಅಂದರೆ ತಾನು ನೀಡಿದ ಸೂಚನೆಗಳನ್ನು ಆರ್‌ಬಿಐ ಪಾಲಿಸಲೇಬೇಕಾದ ಸ್ಥಿತಿಯನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿದೆ. ಹಾಗಾದಲ್ಲಿ ಆರ್‌ಬಿಐ ಗವರ್ನರ್‌ ಅವರೇ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ ತರಾಟೆ:  ಹಿಂದೆ ಯಾವ ಸರ್ಕಾರಗಳೂ ಬಳಸದ ಕಾಯ್ದೆಯನ್ನು ಕೇಂದ್ರ ಸರ್ಕಾರ ಆರ್‌ಬಿಐ ವಿರುದ್ಧ ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಹತಾಶಗೊಂಡಿದೆ. ಆರ್ಥಿಕತೆಗೆ ಸಂಬಂಧಿಸಿದ ಸತ್ಯಗಳನ್ನು ಬಚ್ಚಿಡುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.