ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾಗುವಂತೆ ಪ್ರಧಾನಿ ನರೇಂದ್ರ ಮೋದಿ ರಣವೀಳ್ಯ ನೀಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಇಂದು ಭೇಟಿ ನೀಡಿದ್ದ ಮೋದಿ ಕಾರ್ಯಕರ್ತರಿಗೆ ಚುನಾವಣೆಗೆ ಸಿದ್ದರಾಗುವಂತೆ ಕರೆ ನೀಡಿದ್ದಲ್ಲದೇ, ಕಾಶ್ಮೀರಕ್ಕೆ ಸ್ವಾಯುತ್ತತೆ ನೀಡಬೇಕು ಎಂಬ ಮಾಜಿ ಕೇಂದ್ರ ಸಚಿವ ಚಿದಂಬರಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಅ.29): ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾಗುವಂತೆ ಪ್ರಧಾನಿ ನರೇಂದ್ರ ಮೋದಿ ರಣವೀಳ್ಯ ನೀಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಇಂದು ಭೇಟಿ ನೀಡಿದ್ದ ಮೋದಿ ಕಾರ್ಯಕರ್ತರಿಗೆ ಚುನಾವಣೆಗೆ ಸಿದ್ದರಾಗುವಂತೆ ಕರೆ ನೀಡಿದ್ದಲ್ಲದೇ, ಕಾಶ್ಮೀರಕ್ಕೆ ಸ್ವಾಯುತ್ತತೆ ನೀಡಬೇಕು ಎಂಬ ಮಾಜಿ ಕೇಂದ್ರ ಸಚಿವ ಚಿದಂಬರಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ನಡೆದ ಸೌಂದರ್ಯ ಲಹರಿ ಪಾರಾಯಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ಮೋದಿ ಎಚ್’ಎಎಲ್ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಕಾದಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಉತ್ಸಾಹವನ್ನು ಶ್ಲಾಘಿಸಿದ ಮೋದಿ , ಕರ್ನಾಟಕದ ಜನತೆ ಚುನಾವಣೆಗೆ ಸಿದ್ಧರಾಗಬೇಕು. ವಿಕಾಸದ ಬಂಡಿ ಹತ್ತಲು ತಯಾರಾಗಬೆಕು ಅಂತಾ ಕರೆ ಕೊಟ್ಟರು. ಇದೇ ವೇಳೆ ಕಾಂಗ್ರೆಸ್’ನ ಹಿರಿಯ ನಾಯಕ ಚಿದಂಬರಂ , ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆ ಕೊಡಬೇಕು ಅಂತಾ ನೆನ್ನೆ ಆಡಿದ್ದ ಮಾತಿಗೆ ಅವರ ಹೆಸರನ್ನು ಹೇಳದೇ ಟಾಂಗ್ ನೀಡಿದ್ರು. ಕಾಶ್ಮೀರದ ರಕ್ಷಣೆಗೆ ಬಲಿದಾನ ಮಾಡಿದ ನಮ್ಮ ಸೈನಿಕರ ತ್ಯಾಗ ಮರೆತು ಕಾಂಗ್ರೆಸ್ ಇಂತಹ ಮಾತುಗಳನ್ನು ಆಡುತ್ತಿದೆ. ಕಾಂಗ್ರೆಸ್’ನ ಈ ಧೋರಣೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಅಂತ ಎಚ್ಚರಿಸಿದರು.
ಬೆಂಗಳೂರಿಗೆ ಬರೋಕು ಮುಂಚೆ ಉಜಿರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ , ಯಡಿಯೂರಪ್ಪನವರ ನೇತೃತ್ವದಲ್ಲೇ ಮುಂದಿನ ಚುನಾವಣೆ ,ಅನ್ನೋದನ್ನು ಸೂಚ್ಯವಾಗಿ ಹೇಳಿದರು. ಕರಾವಳಿ ಭಾಗದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಸದಾನಂದ ಗೌಡರನ್ನು ಪ್ರಶ್ನಾತೀತ ನಾಯಕರು ಅನ್ನೋ ರೀತಿಯಲ್ಲಿ ಬಿಂಬಿಸಿದರು.
ಒಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋಕೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಪಷ್ಟ ಮುನ್ಸೂಚನೆಯನ್ನೂ ನೀಡಿ ಹೋಗಿದ್ದಾರೆ.
