ನಾನೂ ಹಿಂದು, ನಮ್ಮೂರಲ್ಲೂ ರಾಮಮಂದಿರ ಕಟ್ಟಿದ್ದೇವೆ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ | ಜೆಡಿಎಸ್ ಬಗ್ಗೆ ಎಚ್ಚರದಿಂದಿರಿ

ಮೈಸೂರು; ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸೋಲುವ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಸೋಲಿನ ಭೀತಿಯಿಂದಲೇ ಪ್ರಧಾನಿ ಗುಜರಾತ್‌ನ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಒಬ್ಬ ಪ್ರಧಾನಿ ಈ ರೀತಿ ಎಲ್ಲಾ ಕ್ಷೇತ್ರದಲ್ಲಿ ಭಾಷಣ ಮಾಡುತ್ತಿರುವುದು ಇದೇ ಮೊದಲು ಎಂದರು.

ಇನ್ನು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮೈಸೂರು ವಲಯ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿ ದ್ದಾರೆ. ನಾನೂ ಕೂಡ ಹಿಂದು. ನನ್ನ ಹೆಸರು ಸಿದ್ದರಾಮಯ್ಯ, ನನ್ನ ಮನೆಯ ದೇವರು ಸಿದ್ದರಾಮೇಶ್ವರ. ನಮ್ಮೂಲ್ಲೂ ರಾಮಮಂದಿರ ಕಟ್ಟಿದ್ದೇವೆ. ಬಿಜೆಪಿಯವರು ಏನೇ ಪ್ರಯತ್ನಿಸಿದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ಸಂಸ್ಕೃತಿ ಗೊತ್ತಿಲ್ಲ: ತಾವು ಶಿಸ್ತಿನ ಪಕ್ಷದವರು, ಒಳ್ಳೆಯ ಸಂಸ್ಕೃತಿಯಿಂದ ಬಂದವರು ಎನ್ನುವ ಬಿಜೆಪಿ ನಾಯಕರಿಗೆ ಸಂಸ್ಕಾರ, ಸಂಸ್ಕೃತಿ ಏನೆಂಬುದೇ ಗೊತ್ತಿಲ್ಲ. ಇತ್ತೀಚೆಗೆ ಬಿಜೆಪಿಯವರು ನನ್ನನ್ನು ಏಕವಚನದಲ್ಲಿ ಬೈಯಲು ಆರಂಭಿಸಿದ್ದಾರೆ. ಅವನ್ಯಾವನೋ ಅನಂತಕುಮಾರ ಹೆಗಡೆ ಅಂತ ಇದಾನೆ. ಆತನಿಗೆ ಸಂವಿಧಾನಾತ್ಮಕ ಭಾಷೆಯನ್ನು ಹೇಗೆ ಬಳಸಬೇಕು ಎಂಬುದೇ ಗೊತ್ತಿಲ್ಲ. ಆತನನ್ನು ಹೇಗೆ ಮಂತ್ರಿ ಮಾಡಿದರೋ? ಯಡಿಯೂರಪ್ಪ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

‘ಅನ್ನಭಾಗ್ಯ’ದಲ್ಲಿ ರಾಜಕೀಯ ಬೇಡ: ಮಾಜಿ ಪ್ರಧಾನಿ ದೇವೇಗೌಡ ಅವರು ರಾಜಕೀಯಕ್ಕಾಗಿ ‘ಭಾಗ್ಯ’ ಯೋಜನೆಗಳನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ರಾಜ್ಯವನ್ನು ಹಸಿವು ಮುಕ್ತ ಮಾಡಲೇಬೇಕು. ಜನರಿಗೆ ಕೆಲಸ ನೀಡಲು ನಮ್ಮಲ್ಲಿ ಹಲವು ಯೋಜನೆ ಇದೆ. ಆದರೆ, ಹಸಿವು ಮುಕ್ತ ಮಾಡೋದು ಸಹ ಅಷ್ಟೇ ಅವಶ್ಯಕ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.

ಜೆಡಿಎಸ್ ಬಗ್ಗೆ ಎಚ್ಚರ: ಇನ್ನು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮೈಸೂರು ವಲಯದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಜೆಡಿಎಸ್ ಪಕ್ಷ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸದಿದ್ದರೆ ಅವರಪ್ಪನಾಣೆಗೂ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಜೆಡಿಎಸ್ ಜಾತ್ಯತೀತ ಹೆಸರಿನಲ್ಲಿ ಮತ ಕೇಳುವುದಕ್ಕೆ ನನ್ನ ತಕರಾರಿಲ್ಲ. ಆದರೆ ಅಧಿಕಾರ ಸಿಗುತ್ತದೆ ಎಂದರೆ ಕೋಮುವಾದಿ ಪಕ್ಷದೊಂದಿಗೆ ಹೋಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತರು ಎಚ್ಚರಿಕೆ ವಹಿಸಬೇಕು’ ಎಂದರು.