* ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಭುಗಿಲೆದ್ದ ಕೋಮುಹಿಂಸೆ* ರಾಜಧಾನಿ ಢಾಕಾದಿಂದ 300ಕಿಮೀ ದೂರದ ಗ್ರಾಮದಲ್ಲಿ 30ಕ್ಕೂ ಹೆಚ್ಚು ಹಿಂದೂ ಮನೆಗಳು ಭಸ್ಮ* 20 ಸಾವಿರ ಉದ್ರಿಕ್ತ ಜನರ ಗುಂಪಿನಿಂದ ಹಿಂಸಾಚಾರ* ಫೇಸ್ಬುಕ್'ನಲ್ಲಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶ

ಢಾಕಾ(ನ. 11): ಫೇಸ್ಬುಕ್'ನಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದರೆಂಬ ಸುದ್ದಿಗೆ ರೊಚ್ಚಿಗೆದ್ದ ಜನರು 30ಕ್ಕೂ ಹೆಚ್ಚು ಹಿಂದೂಗಳ ಮನೆಗಳನ್ನು ಸುಟ್ಟು ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್'ನಲ್ಲಿ ಒಬ್ಬ ಸಾವನ್ನಪ್ಪಿದ್ದು, 10 ಮಂದಿಗೆ ಗಾಯಗಳಾಗಿವೆ. ಬಾಂಗ್ಲಾದೇಶದ ರಾಜಧಾನಿಯಿಂದ 300 ಕಿಮೀ ದೂರದಲ್ಲಿರುವ ರಂಗಪುರ್ ಜಿಲ್ಲೆಯ ಠಾಕೂರ್'ಬರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಠಾಕೂರ್'ಬಾರಿ ಗ್ರಾಮದ ನಿವಾಸಿ ಟೀಟು ರಾಯ್ ಎಂಬಾತ ತನ್ನ ಫೇಸ್ಬುಕ್'ನಲ್ಲಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದನೆಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಆದರೆ, ಫೇಸ್ಬುಕ್'ನಲ್ಲಿ ಪೇಜ್'ನಲ್ಲಿ ಅಂಥ ಪೋಸ್ಟ್ ಯಾವುದೂ ಇಲ್ಲವಾದರೂ ಸುದ್ದಿ ಗಾಡ್ಗಿಚ್ಚಿನಂತೆ ಸುತ್ತಮುತ್ತಲ ಗ್ರಾಮಗಳಿಗೆ ಹಬ್ಬಿದೆ. ನಿನ್ನೆ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಆರೇಳು ಗ್ರಾಮದ ಸುಮಾರು 20 ಸಾವಿರದಷ್ಟು ಜನರು ಒಂದುಗೂಡಿ ಠಾಕೂರ್'ಬರಿ ಗ್ರಾಮಕ್ಕೆ ನುಗ್ಗಿದ್ದಾರೆ. ಬೃಹತ್ ಜನಸಮೂಹದ ಪೈಕಿ ನೂರಾರು ಜನರ ಗುಂಪೊಂದು ಹಿಂದೂಗಳ ಮನೆಗಳ ಮೇಲೆ ಕಲ್ಲುತೂರಾಟ ಮಾಡಲು ಆರಂಭಿಸಿದೆ. ನಿವಾಸಿಗಳು ಹೆದರಿ ಜೀವ ಕೈಲಿಡಿದು ಓಡಿಹೋಗಿದ್ದಾರೆ. ಆನಂತರ ಮನೆಗಳಿಗೆ ನುಗ್ಗಿ ಲೂಟಿ ಮಾಡಿದ ಉದ್ರಿಕ್ತರು ಬೆಂಕಿಹಾಕಿ ಸುಟ್ಟಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ 30ಕ್ಕೂ ಹೆಚ್ಚು ಮನೆಗಳು ಭಸ್ಮವಾಗಿವೆ.

ಪರಿಸ್ಥಿತಿ ಇನ್ನೂ ಬಿಗಡಾಯಿಸುವಷ್ಟರಲ್ಲಿ ಪೊಲೀಸರು ಆಗಮಿಸಿ ದುಷ್ಕರ್ಮಿಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಮಠ ಕಳೆದುಕೊಂಡ ಹಿಂದೂಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.