ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಲಭ್ಯವಾಗುವ ಐದು ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿಬೃಹದಾಕಾರವಾಗಿ ಬೆಳೆದಿದ್ದರ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ರಾಜ್ಯ ನಾಯಕರು ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ.
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಲಭ್ಯವಾಗುವ ಐದು ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿಬೃಹದಾಕಾರವಾಗಿ ಬೆಳೆದಿದ್ದರ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ರಾಜ್ಯ ನಾಯಕರು ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ.
ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆದರೂ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಐದು ಸ್ಥಾನಗಳಿಗೆ ಸುಮಾರು 128 ಆಕಾಂಕ್ಷಿಗಳಿರುವುದರಿಂದ ಆಯ್ಕೆ ಮಾಡುವುದು ದುಸ್ತರವಾಗಲಿದೆ ಎಂಬ ಕಾರಣಕ್ಕಾಗಿ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ನಂತರ 128 ಆಕಾಂಕ್ಷಿಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ಇಮೇಲ್ ಮೂಲಕ ರವಾನಿಸಲಾಯಿತು. ಈ ಪಟ್ಟಿಯನ್ನು ಮುಂದಿಟ್ಟುಕೊಂಡು ವರಿಷ್ಠರು ದೂರವಾಣಿ ಮೂಲಕ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಬುಧವಾರ ರಾತ್ರಿಯೊಳಗಾಗಿ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ 128 ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಾಗಿದೆ. ಸಮಿತಿ ಐದು ಅಭ್ಯರ್ಥಿಗಳನ್ನು ಆದಷ್ಟುಬೇಗ ಅಂತಿಮಗೊಳಿಸಲಿದೆ ಎಂದರು.
ಜಯನಗರ ವಿಧಾನಸಭಾಕ್ಷೇತ್ರದ ಚುನಾವಣಾ ಸಿದ್ಧತೆ ಹಾಗೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಂಪೂರ್ಣ ಪ್ರಯತ್ನ ಮಾಡುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಶಿಕ್ಷಕರ ಮತ್ತು ಪದವೀಧರರಿಂದ ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ನಡೆಯುವ ಚುನಾವಣಾ ಸಿದ್ಧತೆ ಕುರಿತೂ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಸಹ ಉಸ್ತುವಾರಿ ಡಿ.ಪುರಂದರೇಶ್ವರಿ, ಮುಖಂಡರಾದ ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಪ್ರಹ್ಲಾದ್‌ಜೋಷಿ, ಆರ್.ಅಶೋಕ, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.
