ನವದೆಹಲಿ (ಜು. 13):  ರಾಜೀನಾಮೆ ಅಂಗೀಕರಿಸದೆ ಸ್ಪೀಕರ್‌ ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ 10 ಶಾಸಕರು ಹಾಗೂ ರಾಜೀನಾಮೆ ಕುರಿತು ತೀರ್ಮಾನ ತೆಗೆದುಕೊಳ್ಳಲು ಇನ್ನಷ್ಟುಕಾಲಾವಕಾಶ ಅಗತ್ಯವಿದೆ ಎಂದು ಸ್ಪೀಕರ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ನಡೆಸಿತು. ಈ ವೇಳೆ ಸ್ಪೀಕರ್‌ ಪರ ವಾದ ಮಂಡಿಸಿದ ವಕೀಲರು ಅರ್ಜಿಯ ಸಿಂಧುತ್ವವನ್ನೇ ಪ್ರಶ್ನಿಸಿದ್ದಾರೆ.

ಮೊದಲಿಗೆ ದೂರುದಾರ ಅತೃಪ್ತ ಶಾಸಕರ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡಿಸಿ, ಸ್ಪೀಕರ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಮತ್ತು ಗುರುವಾರ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಒಂದೆಡೆ ಶಾಸಕರ ರಾಜೀನಾಮೆ ಪರಿಶೀಲಿಸಲು ಸಮಯ ಬೇಕು ಎಂದರೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನ ಅಧಿಕಾರ ಪ್ರಶ್ನಿಸಿದ್ದಾರೆ. ನರಕಕ್ಕೆ ಹೋಗಿ ಎಂದು ಕೋರ್ಟ್‌ಗೆ ಹೇಳಿದ್ದಾರೆ.

10 ಮಂದಿ ಶಾಸಕರು ಅವರ ಮುಂದೆಯೇ ಹೋಗಿ ರಾಜೀನಾಮೆ ನೀಡಿದ್ದಾರೆ. ಆದರೂ ಪರಿಶೀಲಿಸಲು ಸಮಯ ಬೇಕೆನ್ನುತ್ತಿದ್ದಾರೆ. ಒಂದು ಸಾಲಿನಲ್ಲಿರುವ ರಾಜೀನಾಮೆ ಪತ್ರ ಓದಲು ಅವರಿಗೆಷ್ಟುಸಮಯ ಬೇಕು? ರಾಜೀನಾಮೆ ಸದನದ ಹೊರಗೆ ನಡೆದಿರುವ ಬೆಳವಣಿಗೆ. ಆದ್ದರಿಂದ ಇದರಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರ ಕೋರ್ಟ್‌ಗಿದೆ. ಶಾಸಕರು ನೀಡಿರುವ ರಾಜೀನಾಮೆ ಸ್ವ ಇಚ್ಛೆಯದದ್ದೋ ಅಥವಾ ನೈಜವಾದದ್ದೋ ಎಂಬುದನ್ನಷ್ಟೇ ಸ್ಪೀಕರ್‌ ನೋಡಬೇಕು ಎಂದು ವಾದಿಸಿದರು.

ಈ ಸಂದರ್ಭದಲ್ಲಿ ಸ್ಪೀಕರ್‌ ನಿರ್ಧಾರ ಕೈಗೊಂಡಿದ್ದಾರೆಯೇ ಎಂದು ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಪ್ರಶ್ನಿಸಿದಾಗ, ಇಲ್ಲವೆಂದು ರೋಹಟ್ಗಿ ಉತ್ತರಿಸಿದರು. ಅಧಿವೇಶನ ಪ್ರಾರಂಭಗೊಂಡಿದೆ. ಶಾಸಕರಿಗೆ ವಿಪ್‌ ಜಾರಿಗೊಳಿಸಿ ಅನರ್ಹಗೊಳಿಸಲು ಯೋಜಿಸುತ್ತಿದ್ದಾರೆ.

ಸ್ಪೀಕರ್‌ ಸುಪ್ರೀಂ ಕೋರ್ಟ್‌ಗೆ ಉತ್ತರದಾಯಿಗಳಾಗಿದ್ದಾರೆ. ಕೋರ್ಟ್‌ನ ಆದೇಶದಂತೆ ಸ್ಪೀಕರ್‌ ಯಾಕೆ ಗುರುವಾರವೇ ರಾಜೀನಾಮೆ ತೀರ್ಮಾನ ಕೈಗೊಂಡಿಲ್ಲ. ಸ್ಪೀಕರ್‌ ಮೇಲೆ ನ್ಯಾಯಾಂಗ ನಿಂದನೆ ದೂರು ದಾಖಲಾಗಬೇಕು. ಸ್ಪೀಕರ್‌ ಅವರಿಗೆ ತೀರ್ಮಾನ ಕೈಗೊಳ್ಳಲು ಸೋಮವಾರದವರೆಗೆ ಸಮಯ ನೀಡಿ, ಅಲ್ಲಿಯವರೆಗೆ ಶಾಸಕರನ್ನು ಅನರ್ಹಗೊಳಿಸಬಾರದು ಎಂದು ಆರಂಭದಲ್ಲಿ ವಾದ ಮಂಡಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಗ ಶಾಸಕರಿಗೆ ವಿಪ್‌ ಜಾರಿಗೊಳಿಸಿ ಅಧಿವೇಶನಕ್ಕೆ ಹಾಜರಾಗಿ, ಬಜೆಟ್‌ ಮೇಲೆ ಮತ ಚಲಾಯಿಸುವಂತೆ ಸೂಚಿಸಿವೆ. ಒಂದು ವೇಳೆ ವಿಪ್‌ ಪರವಾಗಿಲ್ಲದಿದ್ದರೆ ಶಾಸಕರನ್ನು ಅನರ್ಹಗೊಳಿಸಿ ಶಿಕ್ಷಿಸಬಹುದು ಮತ್ತು ಶಾಸಕರು ನೀಡಿರುವ ರಾಜೀನಾಮೆ ಅಪ್ರಸ್ತುತವಾಗಲಿದೆ. ಇದಕ್ಕಾಗಿ ರಾಜೀನಾಮೆಯನ್ನು ಸ್ವೀಕರಿಸದೆ ಬಾಕಿಯಿರಿಸಲಾಗಿದೆ ಎಂದು ರೋಹಟ್ಗಿ ಆಪಾದಿಸಿದರು.