ಪರಿಶಿಷ್ಟ ಜಾತಿ ಮತ್ತು ಪಂಗಡ ಕಲ್ಯಾಣ ಸಮಿತಿ ಏಪ್ರಿಲ್ 24ರಂದು ವಿಧಾನಸೌಧದಲ್ಲಿ ನಡೆಸಿದ್ದ ಸಭೆಯಲ್ಲಿ ಪಿ.ಟಿ.ಪರಮೇಶ್ವರ್ ನಾಯಕ್ ಸೇರಿದಂತೆ ಮೂವರು ಶಾಸಕರು ಕಾನೂನು ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿರುದ್ಧ ಮುಗಿಬಿದ್ದಿದ್ದು ಈಗ ಬಹಿರಂಗವಾಗಿದೆ.ಕಾನೂನು ಇಲಾಖೆ ಸರ್ಕಾರದ ಕಾರ್ಯದರ್ಶಿ ಪದೇಪದೇ ನೀಡಿದ ಬೇಜವಾಬ್ದಾರಿ ಉತ್ತರಗಳಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರು ತೀವ್ರ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಕಡೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕ್ಷಮೆಯಾಚಿಸಿದರು ಎಂದು ತಿಳಿದು ಬಂದಿದೆ.
ಬೆಂಗಳೂರು(ಮೇ.01): ಬಡ್ತಿಯಲ್ಲಿ ಮೀಸಲಾತಿ ನೀಡುವ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿರುವ ಪ್ರಕರಣದಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳ ವೈಫಲ್ಯದ ವಿರುದ್ಧ ಪರಿಶಿಷ್ಟ ಸಮುದಾಯದ ಶಾಸಕರು ಗರಂ ಆಗಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ಕಲ್ಯಾಣ ಸಮಿತಿ ಏಪ್ರಿಲ್ 24ರಂದು ವಿಧಾನಸೌಧದಲ್ಲಿ ನಡೆಸಿದ್ದ ಸಭೆಯಲ್ಲಿ ಪಿ.ಟಿ.ಪರಮೇಶ್ವರ್ ನಾಯಕ್ ಸೇರಿದಂತೆ ಮೂವರು ಶಾಸಕರು ಕಾನೂನು ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿರುದ್ಧ ಮುಗಿಬಿದ್ದಿದ್ದು ಈಗ ಬಹಿರಂಗವಾಗಿದೆ.
ಕಾನೂನು ಇಲಾಖೆ ಸರ್ಕಾರದ ಕಾರ್ಯದರ್ಶಿ ಪದೇಪದೇ ನೀಡಿದ ಬೇಜವಾಬ್ದಾರಿ ಉತ್ತರಗಳಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರು ತೀವ್ರ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಕಡೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕ್ಷಮೆಯಾಚಿಸಿದರು ಎಂದು ತಿಳಿದು ಬಂದಿದೆ.
ಕಳೆದ 5 ವರ್ಷಗಳಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಸಮರ್ಥವಾಗಿ ನಿಭಾಯಿಸದ ಸರ್ಕಾರಿ ವಕೀಲರ ವಿರುದ್ಧ ಶಾಸಕರು ಸಭೆಯಲ್ಲಿ ಕಿಡಿ ಕಾರಿದ್ದಾರೆ. ಬಡ್ತಿಯಲ್ಲಿ ಮೀಸಲಾತಿ ನೀಡಿಕೆ ಕುರಿತಂತೆ ಸಂವಿಧಾನಕ್ಕೆ ಕಾಲಾನುಕಾಲಕ್ಕೆ ತಂದಿರುವ ತಿದ್ದುಪಡಿಗಳನ್ನು ನ್ಯಾಯಾಲಯದ ಗಮನಕ್ಕೆ ತರದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿರುವುದು ತಿಳಿದು ಬಂದಿದೆ.
ಸಂವಿಧಾನ ಪರಮೋಚ್ಛವೋ ಅಥವಾ ಸುಪ್ರೀಂ ಕೋರ್ಟ್ ಪರಮೋಚ್ಛವೋ ಎಂಬ ಪ್ರಶ್ನೆಗಳನ್ನೂ ಅಧಿಕಾರಿಗಳಿಗೆ ಶಾಸಕರು ಕೇಳಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಸುವರ್ಣ ನ್ಯೂಸ್ಗೆ ತಿಳಿಸಿವೆ.
ಈ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಕ್ರಮಬದ್ಧವಾಗಿ ವಾದ ಮಾಡದಿರುವುದಕ್ಕೆ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಬಿ.ಬಿ.ನಿಂಗಯ್ಯ ಕಾನೂನು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪ್ರಶ್ನೆಗಳ ಸುರಿಮಳೆಗೈದಿರುವುದು ಗೊತ್ತಾಗಿದೆ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಕಾನೂನು ಇಲಾಖೆಯ ಸರ್ಕಾರದ ಕಾರ್ಯದರ್ಶಿ ತಡಬಡಾಯಿಸಿಕೊಂಡು ಉತ್ತರಿಸಿದ್ದು, ಈ ಉತ್ತರದಿಂದ ಶಾಸಕರು ಅಸಮಾಧಾನಗೊಂಡಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಏಕೆ ವಾದ ಮಾಡಲಿಲ್ಲ ಎಂದು ವಕೀಲರುಗಳನ್ನು ಕೇಳಬೇಕಾಗುತ್ತದೆ ಎಂದು ಉತ್ತರಿಸಿರುವ ಕಾನೂನು ಇಲಾಖೆ ಸರ್ಕಾರದ ಕಾರ್ಯದರ್ಶಿ ಶಾಸಕರ ಟೀಕೆಗೆ ಗುರಿಯಾಗಿದ್ದಾರೆ. ಈ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್, ಆ ಪದ ನಿಮಗೆ ಶೋಭೆ ತರುತ್ತದೆಯೇ? ಸಭೆಯಲ್ಲಿ ಈ ರೀತಿ ಮಾತನಾಡಬಹುದೇ? ಇದು ಒಳ್ಳೆಯದಲ್ಲ ಎಂದು ಪ್ರತ್ಯುತ್ತರ ನೀಡಿದರು ಎಂದು ಮೂಲಗಳು ಖಚಿತಪಡಿಸಿವೆ.
ಕಾನೂನು ಇಲಾಖೆಯ ಕಾರ್ಯದರ್ಶಿ ಜವಾಬ್ದಾರಿಯಿಂದ ಮಾತನಾಡಬೇಕು. ಅಲ್ಲಿ ನಾನು ಹೋಗಿ ವಾದ ಮಾಡಬೇಕೆ ಎಂದೆಲ್ಲಾ ಕೇಳುವುದು ಸರಿಯಲ್ಲ. ಕಾರ್ಯದರ್ಶಿ ತಾವು ಆಡಿರುವ ಮಾತನ್ನು ಹಿಂಪಡೆಯಬೇಕು. ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಕಿಡಿ ಕಾರಿದರು ಎಂದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬರೀ ತೌಡು ಕುಟ್ಟುವ ಕೆಲಸವಾಗಿದೆ. ಯಾವ ಸಮಿತಿ ಸಭೆಯಲ್ಲೂ ಯಾವ ಅಧಿಕಾರಿಗಳೂ ಸರಿಯಾಗಿ ಉತ್ತರ ಕೊಟ್ಟಿಲ್ಲ. ಎಸ್.ಸಿ.ಎಸ್. ಟಿ.ಗಳಿಗೆ ಸಂಬಂಧಿಸಿದ ವಿಷಯಗಳನ್ನು ಯಾರು ನೋಡುತ್ತಾರೆ ಎಂದು ಪರಮೇಶ್ವರ್ ನಾಯಕ್ ಅಧಿಕಾರಿಗಳನ್ನು ಪ್ರಶ್ನಿಸಿರುವುದು ತಿಳಿದು ಬಂದಿದೆ.
ಡಿಪಿಎಆರ್ ವಿರುದ್ಧಕೆಂಡ
ಈ ಪ್ರಕರಣವನ್ನು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ನೋಡಿಕೊಳ್ಳುತ್ತದೆ ಎಂದು ಮುಖ್ಯ ಕಾರ್ಯದರ್ಶಿ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಪಿ.ಟಿ.ಪರಮೇಶ್ವರ್ ನಾಯಕ್, 2006ರಿಂದಲೂ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇಲ್ಲಿಯವರೆಗೆ ಏನು ಮಾಡಿದ್ದಾರೆ? 10 ವರ್ಷಗಳಿಂದ ತಳವೂರಿಕೊಂಡು ಕುಳಿತವರನ್ನು ಬದಲಾಯಿಸಿ. ಕಾರ್ಯದರ್ಶಿಗಳು ಬದಲಾಗುತ್ತಿರುತ್ತಾರೆ. ಆದರೆ ಸಿಬ್ಬಂದಿ ಅಲ್ಲಿಯೇ ಇರುತ್ತಾರೆ. ಬಡ್ತಿಯಲ್ಲಿ ಮೀಸಲಾತಿ ನೀತಿಗೆ ಅವರೆಲ್ಲಾ ವಿರೋಧ ಇದ್ದಾರೆ. ಸರಿಯಾದ ಮಾಹಿತಿ ಕೊಡುವುದಿಲ್ಲ ಎಂದು ಪರಮೇಶ್ವರ್ ನಾಯಕ್ ಮುಖ್ಯ ಕಾರ್ಯದರ್ಶಿಗಳಿಗೆ ದೂರಿದರು ಎಂದು ಗೊತ್ತಾಗಿದೆ.
ಈ ಪ್ರಕರಣ ವಿಚಾರಣೆ ನಡೆದ ಅವಧಿಯವರೆಗೆ ವಿಷಯ ನಿರ್ವಾಹಕರಿಂದ ಹಿಡಿದು ಕಾರ್ಯದರ್ಶಿವರೆಗೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಸಿಸಿಎ ನಿಯಮಾವಳಿಗಳ ಅಡಿಯಲ್ಲಿ ಇಲಾಖೆ ವಿಚಾರಣೆ ನಡೆಸಿ ದಂಡನೆ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು ಎಂದು ತಿಳಿದು ಬಂದಿದೆ.
ಉಡಾಫೆಬೇಡ
ಪರಿಶಿಷ್ಟ ಸಮುದಾಯದ ಅಧಿಕಾರಿಗಳ ವಿರುದ್ಧವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದೇಕೆ? ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಪ್ರಶ್ನಿಸಿದ್ದು, ನೀವು ಉಡಾಫೆ ಉತ್ತರ ಕೊಡುತ್ತಿದ್ದೀರಿ. 3 ತಿಂಗಳಲ್ಲಿ ಜೇಷ್ಠತಾ ಪಟ್ಟಿ ಸಿದ್ಧವಾದ ಮೇಲೆ ಅದನ್ನು ಅನುಷ್ಠಾನ ಮಾಡುತ್ತೀರಿ. ಮರು ಪರಿಶೀಲನಾ ಅರ್ಜಿ ಖಂಡಿತವಾಗಿಯೂ ತಿರಸ್ಕೃತಗೊಳ್ಳುತ್ತದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
