ವಿದ್ವತ್ ಜತೆ ಸಂಧಾನಕ್ಕೆ ಜಮೀರ್ ಯತ್ನ..?

news | Thursday, March 1st, 2018
Suvarna Web Desk
Highlights

ಹಲ್ಲೆ ಘಟನೆ ನಡೆದ ಮರುದಿನವೇ ಜಮೀರ್ ಅಹಮ್ಮದ್ ಅವರು ಮಲ್ಯಆಸ್ಪತ್ರೆಗೆ ತೆರಳಿ ವಿದ್ವತ್ ಆರೋಗ್ಯ ವಿಚಾರಿಸಿ ಬಂದಿದ್ದರು. ಆದರೆ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡು ನಲಪಾಡ್ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಕಂಟಕವಾದ ಮುನ್ಸೂಚನೆ ವ್ಯಕ್ತವಾದ ಬೆನ್ನಲ್ಲೇ ಜಮೀರ್ ಅವರು, ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರು(ಮಾ.01): ಇತ್ತೀಚೆಗೆ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ನಡೆದ ಉದ್ಯಮಿ ಪುತ್ರ ವಿದ್ವತ್ ಮೇಲಿನ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತವನ ಸಹಚರರ ಗೂಂಡಾಗಿರಿ ಪ್ರಕರಣವು ರಾಜಕೀಯ ರಂಗು ಪಡೆದುಕೊಂಡಿದ್ದು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಆಡಳಿತಾರೂಢ ಕಾಂಗ್ರೆಸ್ ಕಡೆಗೆ ಕಾಲಿರಿಸಿರುವ ಜೆಡಿಎಸ್‌'ನ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಖಾನ್ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ಕುರಿತು ನ್ಯಾಯಾಲಯದ ಅಂತಿಮ ಆದೇಶವು ಶುಕ್ರವಾರ ಹೊರಬೀಳುವ ಹಿನ್ನೆಲೆಯಲ್ಲಿ ರಾಜಿ ಸಂಧಾನ ಯತ್ನದ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪೂರಕ ಎನ್ನುವಂತೆ ಮಲ್ಯ ಆಸ್ಪತ್ರೆಗೆ ಮೇಲಿಂದ ಮೇಲೆ ತೆರಳಿ ವಿದ್ವತ್ ತಂದೆ ಉದ್ಯಮಿ ಲೋಕನಾಥನ್ ಜತೆ ಶಾಸಕ ಜಮೀರ್ ಅಹಮ್ಮದ್ ಖಾನ್ ಮಾತುಕತೆ ನಡೆಸಿದ್ದಾರೆ.

ಇದುವರೆಗೆ ಹಲ್ಲೆ ಪ್ರಕರಣದ ಕುರಿತು ತನಿಖಾಧಿಕಾರಿಗಳಿಗೆ ವಿದ್ವತ್ ಹೇಳಿಕೆ ನೀಡಿಲ್ಲ. ಹೀಗಾಗಿ ರಾಜಿ ಸಂಧಾನದ ಮೂಲಕ ನಲಪಾಡ್ ವಿರುದ್ಧ ವಿದ್ವತ್ ಪೋಷಕರ ಕೋಪ ತಣಿಸುವ ಕೆಲಸಕ್ಕೆ ಜಮೀರ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಬುಧವಾರ ಬೆಳಗ್ಗೆ ಮಲ್ಯ ಆಸ್ಪತ್ರೆಯಲ್ಲಿ ಲೋಕನಾಥನ್ ಅವರನ್ನು ಭೇಟಿಯಾಗಿ ಜಮೀರ್ ಹೊರಬಂದ ಕೆಲವೇ ನಿಮಿಷದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್ ತಂದೆ ಶಾಸಕ ಹ್ಯಾರಿಸ್ ಅವರು ವಿದ್ವತ್‌ನ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಲೋಕನಾಥನ್ ಜತೆ ಚರ್ಚೆ ನಡೆಸಿದ್ದಾರೆ. ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹ್ಯಾರಿಸ್ ತೆರಳಿದ್ದಾರೆ.

ಕಳೆದ ಶನಿವಾರ ಸಹ ತಮ್ಮ ಕುಟುಂಬದ ಜತೆ ಆಸ್ಪತ್ರೆಗೆ ಆಗಮಿಸಿ ಲೋಕನಾಥನ್ ಅವರನ್ನು ಹ್ಯಾರಿಸ್ ಭೇಟಿಯಾಗಿದ್ದರು. ಇತ್ತ ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ವಿದ್ವತ್ ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಘಟನೆ ಕುರಿತು ಅವರ ತಂದೆ ಜತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿರುವುದು ರಾಜಿ ಸಂಧಾನ ಮಾತುಗಳಿಗೆ ಇಂಬು ನೀಡುವಂತಿದೆ. ಹಲ್ಲೆ ಘಟನೆ ನಡೆದ ಮರುದಿನವೇ ಜಮೀರ್ ಅಹಮ್ಮದ್ ಅವರು ಮಲ್ಯಆಸ್ಪತ್ರೆಗೆ ತೆರಳಿ ವಿದ್ವತ್ ಆರೋಗ್ಯ ವಿಚಾರಿಸಿ ಬಂದಿದ್ದರು. ಆದರೆ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡು ನಲಪಾಡ್ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಕಂಟಕವಾದ ಮುನ್ಸೂಚನೆ ವ್ಯಕ್ತವಾದ ಬೆನ್ನಲ್ಲೇ ಜಮೀರ್ ಅವರು, ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments 0
Add Comment

  Related Posts

  Salman khan new Gossip news

  video | Saturday, April 7th, 2018

  Salman Khan Convicted

  video | Thursday, April 5th, 2018

  Salman Khan Convicted

  video | Thursday, April 5th, 2018

  Zameer Ahmed Khan Meets CM Siddaramaiah To Lobby For Friends Ticket

  video | Thursday, April 12th, 2018
  Suvarna Web Desk