ನವೆಂಬರ್ 27ರ ರಾತ್ರಿ ಶಾಸಕ ಚಿಕ್ಕಮಾದು, ಸುಮಾರು 300ಕ್ಕೂ ಹೆಚ್ಚು ಬೆಂಬಲಿಗರನ್ನು ಕರೆತಂದು ಬ್ಯಾರಿಕೆಡ್’ಗಳನ್ನು ಕಿತ್ತೊಗೆದು ತಮ್ಮ ಖಾಸಗೀ ಕಾರಿನಲ್ಲೇ ಅರಣ್ಯ ಪ್ರವೇಶ ಮಾಡಿದ್ದಾರೆ.
ಮೈಸೂರು(ನ.29): ಬಂಡಿಪುರ ಅರಣ್ಯ ಪ್ರದೇಶದಲ್ಲಿ ನಡೆಯುವ ಬೇಲದಕುಪ್ಪೆ ಮಹದೇಶ್ವರ ಜಾತ್ರೆಗೆ ಅಕ್ರಮವಾಗಿ ಕಾರಿನಲ್ಲಿ ಅರಣ್ಯ ಪ್ರವೇಶಿಸಿದ್ದೂ ಅಲ್ಲದೇ ಅಧಿಕಾರಿಗಳೊಂದಿಗೆ ಶಾಸಕ ಚಿಕ್ಕಮಾದು ವಾಗ್ವಾಧ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೆಚ್.ಡಿ. ಕೋಟೆಯ ಶಾಸಕರಾಗಿರುವ ಚಿಕ್ಕಮಾದು ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ನವೆಂಬರ್ 27 ರಿಂದ 30ರವರೆಗೆ ಬಂಡಿಪುರದ ಕಾಡಿನಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ನಡೆಯುತ್ತದೆ. ಈ ವೇಳೆ ಜಾತ್ರೆಗಾಗಿ ಬರುವ ಜನರು ಕಾಡಿನಲ್ಲೇ ಅಡುಗೆ ಮಾಡಿ ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಭಕ್ತರಿಗೇನೂ ತೊಂದರೆಯಾಗಿರಲಿಲ್ಲ.
ಈ ನಡುವೆ ನವೆಂಬರ್ 27ರ ರಾತ್ರಿ ಶಾಸಕ ಚಿಕ್ಕಮಾದು, ಸುಮಾರು 300ಕ್ಕೂ ಹೆಚ್ಚು ಬೆಂಬಲಿಗರನ್ನು ಕರೆತಂದು ಬ್ಯಾರಿಕೆಡ್’ಗಳನ್ನು ಕಿತ್ತೊಗೆದು ತಮ್ಮ ಖಾಸಗೀ ಕಾರಿನಲ್ಲೇ ಅರಣ್ಯ ಪ್ರವೇಶ ಮಾಡಿದ್ದಾರೆ. ಶಾಸಕರಾಗಿದ್ದು ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಈ ವೇಳೆ ಚಿಕ್ಕಮಾದು ಅಧಿಕಾರಿಗಳ ಜತೆ ವಾಗ್ವಾದವನ್ನು ನಡೆಸಿದ್ದಾರೆ.
ಇಷ್ಟೆಲ್ಲಾ ರಾದ್ಧಾಂತಗಳು ನಡೆದಿದ್ದರೂ ಶಾಸಕರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
