ಮಡಿಕೇರಿ(ಸೆ.16): ಅನೈತಿಕ ಚಟುವಟಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತುಮಕೂರು ಜಿಲ್ಲೆ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪುತ್ರ ಕೆ.ರಾಜೀವ್ ಸೇರಿದಂತೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಕುಶಾಲನಗರ ಸಿವಿಲ್ ನ್ಯಾಯಾಲಯ ಇಂದು ನಡೆಸಲಿದೆ.
ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಹೋಮ್‌ಸ್ಟೇಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಸೆ. 11ರಂದು ನಾಲ್ವರನ್ನು ಪೊಲೀಸರು ಬಂಧಿಸಿ ಮಹಿಳೆಯನ್ನು ರಕ್ಷಿಸಿದ್ದರು. ಕೆ.ರಾಜೀವ್, ಶನಿವಾರಸಂತೆ ಬಳಿಯ ಕೂಗೆಕೋಡಿ ನಿವಾಸಿ ಕೆ.ಎಲ್.ಮಧು, ಶಾಂತವೇರಿ ನಿವಾಸಿ ಪ್ರಮೋದ್, ಹೋಮ್‌ಸ್ಟೇ ಮಾಲೀಕ ಪ್ರಸನ್ನ ನ್ಯಾಯಾಂಗ ಬಂಧನದಲ್ಲಿದ್ದು, ಆರೋಪಿಗಳ ಪರವಾಗಿ ಪಟ್ಟಣದ ವಕೀಲ ಸುರೇಶ್ ಬಾಬ್ಲಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ನಟರಾಜ್ ಅವರು ಜಾಮೀನು ಕೋರಿಕೆ ಬಗ್ಗೆ ಆಕ್ಷೇಪಣೆ ಸಲ್ಲಿಸಬೇಕಾಗಿರುವ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.
