ಬೆಂಗಳೂರು(ನ.18): ಮುಂಬರುವ 2018ರ ವಿಧಾನಸಭಾ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲೇ ನಡೆಯಲಿದ್ದು ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಕೆಂಗೇರಿಯಲ್ಲಿ ಆಯೋಜಿಸಲಾಗಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ ಪರಮೇಶ್ವರ್ ನೇತೃತ್ವದಲ್ಲೇ ಪಕ್ಷ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ. ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಜಿ.ಪರಮೇಶ್ವರ್ ತಮ್ಮ ಭಾಷಣದಲ್ಲಿ ಚುನಾವಣಾ ವಿಚಾರ ಪ್ರಸ್ತಾಪಿಸದೇ ಮುಂದೆ ಯಾರು ಸಿಎಂ ಆಗುತ್ತಾರೋ ಗೊತ್ತಿಲ್ಲ. ಆದರೆ ಸೋಮಶೇಖರ್ ಮಾತ್ರ ಸಹಕಾರ ಸಚಿವರಾಗುತ್ತಾರೆಂದರು. ಕೇಂದ್ರ ಸರ್ಕಾರದ ನೋಟು ಅಪವೌಲ್ಯದ ವಿರುದ್ಧ ತೀವ್ರ ದಾಳಿ ನಡೆಸಿದರು. ಬಡವರನ್ನು ಪ್ರಧಾನಿ ಮೋದಿ ಬೀದಿ ಬದಿ ನಿಲ್ಲುವಂತೆ ಮಾಡಿ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಹೇರಿದ್ದಾರೆ ಎಂದು ಪರಮೇಶ್ವರ್ ಹೇಳಿದರು.