ಜೆಡಿಎಸ್‌ಗೆ ರಾಜೀನಾಮೆ ಕೊಟ್ಟ ಮಾಜಿ ಸಚಿವನಿಗೆ ಬಿಜೆಪಿ ಶಾಸಕ ರೆಡ್ ಕಾರ್ಪೆಟ್
ಜೆಡಿಎಸ್ ಗೆ ರಾಜೀನಾಮೆ ನೀಡಿರುವ ಮಾಜಿ ಸಚಿವನಿಗೆ ಬಿಜೆಪಿ ಗಾಳ ಹಾಕುತ್ತಿದ್ಯಾ ಎನ್ನುವ ಪ್ರಶ್ನೆಯನ್ನು ಶಾಸಕ ರಘುಪತಿ ಭಟ್ ಹುಟ್ಟುಹಾಕಿದ್ದಾರೆ. ಪರೋಕ್ಷವಾಗಿ ಮಾಜಿ ಸಚಿವರನ್ನು ಬಿಜೆಪಿಗೆ ಸ್ವಾಗತ ಮಾಡಿದ್ದಾರೆ.
ಉಡುಪಿ, [ಸೆ.05]: ಜೆಡಿಎಸ್ ಗೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರು ಪರೋಕ್ಷವಾಗಿ ಬಿಜೆಪಿಗೆ ಸ್ವಾಗತಿಕೋರಿದ್ದಾರೆ.
ಇಂದು [ಗುರುವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಬಿಜೆಪಿಗೆ ಅರ್ಜಿ ಹಾಕಿದ್ರೆ ಪಕ್ಷ ಪರಿಗಣಿಸಬಹುದು. ರಾಜ್ಯ, ಕೇಂದ್ರ ಹಾಗೂ ಜಿಲ್ಲೆಯ ಪಕ್ಷದ ನಾಯಕರು ಸೇರಿ ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಗೆ ಆಹ್ವಾನಿಸಿದರು.
ಜೆಡಿಎಸ್‌ಗೆ ರಾಜೀನಾಮೆ ನೀಡಿದ ಮಾಜಿ ಸಚಿವ
ಹಿಂದೆ ಅರ್ಜಿ ಹಾಕಿದ್ದರು. ಆಗ ಬಿಜೆಪಿ ಗೇಟ್ ಹಾಕಿದೆ ಅಂತ ವಾಪಾಸ್ ಹೋಗಿದ್ದರು. ಆದರೆ ಈಗ ಅರ್ಜಿ ಹಾಕಿದರೆ ಗೇಟ್ ಓಪನ್ ಇದೆ. ಬಿಜೆಪಿಗೆ ಬರಬಹುದು ತೊಂದರೆ ಇಲ್ಲ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಸದ್ಯ ಜೆಡಿಎಸ್ ಗೆ ರಾಜಿನಾಮೆ ಕೊಟ್ಟಿದ್ದಾರೆ. ಪ್ರಮೋದ್ ಅವರನ್ನು ಕಾಂಗ್ರೆಸ್ ಇನ್ನೂ ಬರಮಾಡಿಕೊಂಡಿಲ್ಲ. ಮುಂದೇನಾಗುತ್ತೋ ನೋಡೋಣ. ಲೋಕಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಸೋಲ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರನೂ ಬೀಳುತ್ತೆ ಎಂದು ಮೊದಲೇ ಭವಿಷ್ಯ ಹೇಳಿದ್ದೆವು ಎಂದು ಹೇಳಿದರು.
ಪ್ರಮೋದ್ ಮಧ್ಯರಾಜ್ ಅವರು 2019ರ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ವಿರುದ್ಧ ಪರಾಭವಗೊಂಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಕ್ಷೇತ್ರ ಹಂಚಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಪಾಲಾಗಿತ್ತು. ಇದ್ರಿಂದ ಕಾಂಗ್ರೆಸ್ ನಲ್ಲಿದ್ದ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಸೇರಿಕೊಂಡಿದ್ದರು.
ಇದೀಗ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಇದುವರೆಗೂ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಮೋದ್ ಒಳಗೊಳಗೆ ಬಿಜೆಪಿ ಸೇರುವ ಪ್ಲಾನ್ ಏನಾದ್ರೂ ಮಾಡಿದ್ದಾರಾ? ಎನ್ನುವ ಪ್ರಶ್ನೆಗಳು ಸಹ ಉದ್ಭವಿಸಿವೆ.
ಒಟ್ಟಿನಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಅವರು ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬೇರೆ-ಬೇರೆ ಆಯಾಮ ಪಡೆದುಕೊಂಡಿದಂತೂ ಸತ್ಯ.