ತಮಿಳುನಾಡಿನ ಎರಡು ಪ್ರಮುಖ ಪಕ್ಷಗಳಲ್ಲಿ ಅಧಿಕಾರ ಬದಲಾವಣೆಯಾದಂತಾಗಿದೆ.

ಚೆನ್ನೈ(ಜ. 04): ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಅಧಿಕಾರ ಈಗ ಅಪ್ಪನಿಂದ ಮಗನಿಗೆ ಹಸ್ತಾಂತರಗೊಂಡಿದೆ. ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರ ಎಂಕೆ ಸ್ಟಾಲಿನ್ ಅವರು ಡಿಎಂಕೆ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಮಹಾಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಟಾಲಿನ್ ಅವರಿಗೆ ಪಕ್ಷದ ನೇತೃತ್ವ ಸಿಗುವುವುದು ನಿರೀಕ್ಷಿತವೇ ಆಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸ್ಟಾಲಿನ್ ಅವರೇ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು. ಪಕ್ಷದೊಳಗೆ ಯಾರೂ ಕೂಡ ಅಪಸ್ವರ ಎತ್ತಲಿಲ್ಲ. ಅಧಿಕಾರ ಹಸ್ತಾಂತರ ನಿರ್ವಿಘ್ನವಾಗಿ ನೆರವೇರಿತು.

ಇದರೊಂದಿಗೆ ತಮಿಳುನಾಡಿನ ಎರಡು ಪ್ರಮುಖ ಪಕ್ಷಗಳಲ್ಲಿ ಅಧಿಕಾರ ಬದಲಾವಣೆಯಾದಂತಾಗಿದೆ. ಜಯಲಲಿತಾ ಸಾವಿನ ಬಳಿಕ ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಡಿಎಂಕೆ ಪಕ್ಷದಲ್ಲೂ ಅಧಿಕಾರದ ಬದಲಾವಣೆ ಆಗಿದೆ. ಇನ್ನು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದಲ್ಲಿ ಕ್ಷಿಪ್ರ ಕ್ರಾಂತಿಯೇ ನಡೆದುಹೋಗಿ ಅಖಿಲೇಶ್ ಯಾದವ್ ತಮ್ಮ ತಂದೆಯನ್ನೇ ಬದಿಗೆ ಸರಿಸಿ ಪಕ್ಷದ ಅಧಿಕಾರ ಪಡೆದುಕೊಂಡಿರುವುದು ಗಮನಾರ್ಹ.