ಚೆನ್ನೈ (ಸೆ.16): ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ತಮಿಳುನಾಡಿನ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು, ಕರ್ನಾಟಕದಲ್ಲಿ ಕಾವೇರಿ ಗಲಾಟೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಇಂದು ತಮಿಳುನಾಡ್ ಬಂದ್ ಗೆ ಕರೆ ನೀಡಿತ್ತು. ಆದರೆ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಬೆಂಬಲಿಸಿ ತಮಿಳು ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿದವು. ಎಗ್ಮೋರ್ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಸೇರಿದಂತೆ ಅವ್ರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.
ತಿರುಚಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಂಡಿಎಂಕೆ ಮುಖ್ಯಸ್ಥ ವೈಕೋ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.
ಪುದುಕೋಟೆಯಲ್ಲಿ ತಮಿಳು ಸಂಘಟನೆ ಕಾರ್ಯಕರ್ತರು ರೈಲಿಗೆ ಮುತ್ತಿಗೆ ಹಾಕಿದರು. ಆದರೆ ಚೆನ್ನೈನಲ್ಲಿ ಬಂದ್ ಶಾಂತಯುತವಾಗಿತ್ತು.
ಸರ್ಕಾರಿ ಬಸ್ಸುಗಳಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಬಹಳ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದರು. ಪೆಟ್ರೋಲ್ ಬಂಕುಗಳು ಕೂಡ ತೆರೆದಿದ್ದವು.
