ಬೆಂಗಳೂರು :  ಸಂಪಿಗೆಹಳ್ಳಿಯ ಹೆಗಡೆ ನಗರದಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಮನೆಯ ಸಂಪ್‌ನಲ್ಲಿ ಶನಿವಾರ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೆಗಡೆನಗರ ಬಾಲಾಜಿ ಕೃಪಾಲೇಔಟ್‌ನ ನಿವಾಸಿ ಅಫ್ರೋಜ್‌ ಖಾನ್‌ (36) ಮೃತ ವ್ಯಕ್ತಿ.

ಕಳೆದ ಒಂಬತ್ತು ವರ್ಷಗಳ ಹಿಂದೆ ಅಫ್ರೋಜ್‌ಖಾನ್‌ ಅವರನ್ನು ಮೆಹರಾಜ್‌ ವಿವಾಹವಾಗಿದ್ದು, ದಂಪತಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಅಪ್ರೋಜ್‌ ಕಾಲ್‌ ಸೆಂಟರ್‌ ಉದ್ಯೋಗಿಯಾಗಿದ್ದು, ಒಂದು ವರ್ಷದಿಂದ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪತಿ ಸರಿಯಾಗಿ ಕೆಲಸಕ್ಕೆ ಹೋಗದ ಹಿನ್ನೆಲೆಯಲ್ಲಿ ಪತ್ನಿ ಕಳೆದ 15 ದಿನಗಳ ಹಿಂದೆ ತವರು ಮನೆಗೆ ಹೋಗಿ ನೆಲೆಸಿದ್ದರು.

ರಂಜಾನ್‌ ಹಿನ್ನೆಲೆಯಲ್ಲಿ ಜೂ.5ರಂದು ಅಪ್ರೋಜ್‌ ಖಾನ್‌ ಪತ್ನಿಯ ತವರು ಮನೆಗೆ ಹೋಗಿ ಬಂದಿದ್ದರು. ಜೂ.6ರಂದು ಅಪ್ರೋಜ್‌ ಖಾನ್‌ ಏಕಾಏಕಿ ಕಾಣೆಯಾಗಿದ್ದರು. ಶನಿವಾರ ಮಧ್ಯಾಹ್ನ ಮನೆಯ ಸಂಪ್‌ ಬಳಿ ದುರ್ವಾಸನೆ ಬರತೊಡಗಿತ್ತು. ಸಂಪ್‌ ಮುಚ್ಚಳ ತೆಗೆದು ನೋಡಿದಾಗ ಸಂಪ್‌ನೊಳಗೆ ಅಪ್ರೋಜ್‌ ಮೃತದೇಹ ಪತ್ತೆಯಾಗಿದೆ. ಕೂಡಲೇ ಮನೆ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ಸಂಪ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಪತಿಯ ಸಾವಿನ ಬಗ್ಗೆ ಸಾಕಷ್ಟುಸಂಶಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅಫ್ರೋಜ್‌ ಪತ್ನಿ ಮೆಹರಾಜ್‌ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಅಫ್ರೋಜ್‌ಖಾನ್‌ ಪತ್ನಿ ತವರು ಮನೆಗೆ ಹೋಗಿದ್ದ ಹಿನ್ನೆಲೆಯಲ್ಲಿ ನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಮೃತ ವ್ಯಕ್ತಿಯ ಮೊಬೈಲ್‌ ಕರೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.