ನವದೆಹಲಿ :  ಉತ್ತಮ ಆಡಳಿತ ನೀಡಲು ಸ್ವಾತಂತ್ರ್ಯ ಸಂಗ್ರಾಮ ರೀತಿಯ ಆಂದೋಲನ ರೂಪಿಸಬೇಕಿದೆ. ಅಂದು ಹೇಗೆ ಎಲ್ಲರೂ ಒಟ್ಟಾಗಿ ಹೋರಾಡಿದ್ದರೋ, ಹಾಗೆ ಇಂದೂ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ. ಚುನಾವಣೆ ವೇಳೆ ಅನಗತ್ಯವಾಗಿ ಭೀತಿಗೆ ಸಿಲುಕುವಂತಾಗಿ, ಶೋಷಣೆಗೆ ಒಳಗಾಗಿದ್ದ ಅಲ್ಪಸಂಖ್ಯಾತರ ವಿಶ್ವಾಸವನ್ನೂ ಗೆಲ್ಲಬೇಕಿದೆ. ಧರ್ಮ, ಜಾತಿ ಪರಿಗಣಿಸದೆ, ಯಾವುದೇ ತಾರತಮ್ಯ ಮಾಡದೆ ಸೇವೆ ಮಾಡಬೇಕಿದೆ. ಒಟ್ಟಾರೆಯಾಗಿ, ನಮ್ಮ ಮೇಲೆ ನಂಬಿಕೆ ಇಟ್ಟವರ ಜತೆಗೆ, ನಮ್ಮ ಮೇಲೆ ನಂಬಿಕೆ ಇರದಿದ್ದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಸಂಸದೀಯ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ 75 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪಠಿಸಿದ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಮಂತ್ರಗಳಿವು.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ 2ನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಅವರು ಬಿಜೆಪಿ ಹಾಗೂ ಮಿತ್ರ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿ, ನವಭಾರತ ನಿರ್ಮಾಣಕ್ಕೆ ತಮ್ಮ ಚಿಂತನೆಗಳನ್ನು ವಿವರಿಸಿದರು.

‘ಚುನಾವಣೆಗಳು ಸಾಮಾನ್ಯವಾಗಿ ವಿಭಜಕವಾಗಿರುತ್ತವೆ. ಆದರೆ, 2019ರ ಚುನಾವಣೆಯು ಜನರು ಮತ್ತು ಸಮಾಜವನ್ನು ಬೆಸೆದಿದೆ. ಕಳೆದ ಐದು ವರ್ಷಗಳ ಕಾಲ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ಗಾಗಿ ಕೆಲಸ ಮಾಡಿದ್ದೇವೆ. ಇದೀಗ ನಾವು ಎಲ್ಲರ ವಿಶ್ವಾಸಕ್ಕಾಗಿ ಯತ್ನಿಸಬೇಕಿದೆ. ಈ ಹಿಂದೆ ಬಡವರು ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ವಂಚಿಸುತ್ತಾ ಬರಲಾಗಿದೆ. ಇದರ ಬದಲಾಗಿ ಅವರ ಶಿಕ್ಷಣ, ಆರೋಗ್ಯದತ್ತ ಗಮನಹರಿಸಬೇಕಿತ್ತು. ಆದರೆ, ಕೆಲಸ ಆಗಿಲ್ಲ. ಮುಂದಿನ ದಿನಗಳಲ್ಲಿ ನಾವು ಅವರ ನಂಬಿಕೆಯನ್ನು ಗಳಿಸಬೇಕು. ಈ ಚುನಾವಣೆಯಲ್ಲಿ ಅಧಿಕಾರದ ಪರ ಅಲೆಯ ಕಾರಣದಿಂದಾಗಿ ಫಲಿತಾಂಶವು ಧನಾತ್ಮಕವಾಗಿದೆ. 2014-19ರವರೆಗೂ ನಾವು ಬಡವರಿಗಾಗಿಯೇ ಕೆಲಸ ಮಾಡಿದ್ದೆವು. ಹೀಗಾಗಿ, ಅವರು ಮತ್ತೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಮೋದಿ ಗಟ್ಟಿಧ್ವನಿಯಲ್ಲಿ ಹೇಳಿದರು.

ನವ ಭಾರತ ನಿರ್ಮಾಣ: 

ಹೊಸ ಚೈತನ್ಯದೊಂದಿಗೆ ನವ ಭಾರತದ ನಿರ್ಮಾಣ ಮಾಡುವ ನಮ್ಮ ಸರ್ಕಾರದ ಕೆಲಸ ಈಗಿನಿಂದಲೇ ಶುರುವಾಗಿದೆ. ಇದಕ್ಕಾಗಿ ಯಾವುದೇ ಜಾತಿ ಧರ್ಮ ಹಾಗೂ ನಂಬಿಕೆಗಳ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಸಂಸದರೂ ಕೈ ಜೋಡಿಸಬೇಕು ಎಂದು ಮೋದಿ ಕರೆ ಕೊಟ್ಟರು. ಇದೆ ವೇಳೆ ಎನ್‌ಡಿಎ ಕೂಟದಿಂದ ಆಯ್ಕೆಯಾಗಿರುವ ಯಾವುದೇ ನಾಯಕರು ತಾವು ಗಣ್ಯರು ಎಂಬ ಮನೋಭಾವನೆಯನ್ನು ಮೊದಲು ತೊಡೆದು ಹಾಕಬೇಕು. ಅಗತ್ಯವಿರುವ ಕಡೆಗಳಲ್ಲಿ ಸಾಮಾನ್ಯ ಜನರಂತೆ ಸರದಿ ಸಾಲಿನಲ್ಲಿ ನಿಂತು ಅವಕಾಶ ಪಡೆಯಬೇಕು ಎಂದು ಕರೆಕೊಟ್ಟರು.

ವರದಿಗೆ ಕಿವಿಗೊಡಬೇಡಿ:  ಯಾರಾರ‍ಯರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾಧ್ಯಮ ವರದಿಗೆ ಕಿವಿಗೊಡಬೇಡಿ. ಸಾಮರ್ಥ್ಯ, ನಿಯಮಾನುಸಾರ ಖಾತೆ ನಿಡಬಹುದು. ಕೆಲವೊಮ್ಮೆ ಮಾಧ್ಯಮಗಳು ಗೊಂದಲ ಉಂಟು ಮಾಡಲು ಅಥವಾ ಕೆಟ್ಟಉದ್ದೇಶಗಳನ್ನು ಇಟ್ಟುಕೊಂಡು ಮಾಧ್ಯಮಗಳು ಇಂಥ ವರದಿ ಮಾಡುತ್ತವೆ. ಎಂದರು. ಜೊತೆಗೆ ಕೆಲವರು ತಮ್ಮ ಜನಪ್ರಿಯತೆಗಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಾರೆ. ಕೆಲವೊಮ್ಮೆ ಇಂಥ ಹೇಳಿಕೆಗಳಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗುತ್ತದೆ. ಹೀಗಾಗಿ, ಇಂಥ ಸಂದರ್ಭದಲ್ಲಿ ಮಾಧ್ಯಮಗಳಿಂದ ದೂರ ಉಳಿದುಬಿಡಿ ಎಂದು ಸಲಹೆ ನೀಡಿದರು.

ಭರವಸೆ ಇಟ್ಟವರಿಗಾಗಿ ಶ್ರಮಿಸಿ :  ನಮ್ಮ ಮೇಲೆ ಭರವಸೆಯಿಟ್ಟವರಿಗಾಗಿ ನಾವು ಸದಾ ಶ್ರಮಿಸಬೇಕು. ಅಲ್ಲದೆ, ನಮ್ಮ ಮೇಲೆ ಭರವಸೆಯಿಟ್ಟಿಲ್ಲದವರ ಮನಸುಗಳನ್ನು ನಾವು ನಮ್ಮ ಕೆಲಸದ ಮುಖಾಂತರ ಗೆಲ್ಲಬೇಕಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ನಾಯಕರ ಪರಿಶ್ರಮದ ಕೆಲಸಕ್ಕಾಗಿ ಜನ ಮತ ಹಾಕಿದ್ದಾರೆ. ಇದರಿಂದಾಗಿ ಎನ್‌ಡಿಎ ಕೂಟಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಆದರೆ, ಈ ಗೆಲುವು ನನಗೆ ಹೆಚ್ಚು ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದೆ. ಎಲ್ಲರೂ ಒಂದುಗೂಡಿ ಹೊಸ ಚೈತನ್ಯದೊಂದಿಗೆ ಕೆಲಸ ಮಾಡುವುದೇ ಎನ್‌ಡಿಎ ಸರ್ಕಾರದ ಹೊಸ ಮಂತ್ರವಾಗಿದೆ. ಅಲ್ಲದೆ, ದೇಶದ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಹತ್ವಾಕಾಂಕ್ಷೆ (ನಾರಾ- ನ್ಯಾಷನಲ್‌ ಆ್ಯಂಬಿಷನ್‌+ ರೀಜಿನಲ್‌ ಆಸ್ಪಿರೇಷನ್‌)ಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಮಾಣ ದಿನಾಂಕ, ಸಚಿವರ ಪಟ್ಟಿನೀಡಿ: ಮೋದಿಗೆ ರಾಷ್ಟ್ರಪತಿ

ನವದೆಹಲಿ: ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ ಶನಿವಾರ ರಾತ್ರಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಹಂಗಾಮಿ ಪ್ರಧಾನಿಯಾಗಿ ನಿಯುಕ್ತಿಗೊಳಿಸಿದ ರಾಷ್ಟ್ರಪತಿಗಳು, ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದ ದಿನಾಂಕ, ಸಮಯ ಹಾಗೂ ಸಂಪುಟ ಸದಸ್ಯರ ಪಟ್ಟಿಯನ್ನು ನೀಡುವಂತೆ ಸೂಚಿಸಿದರು.