ಮಂಗಳೂರು, ಅ.12: ಮಹಾಮಳೆಯಿಂದಾಗಿ ಕೊಡಗಿನಲ್ಲಿ ಉಂಟಾದ ಜಲಪ್ರಳಯದ ವೇಳೆ ಜೀವದ ಹಂಗು ತೊರೆದು ಜನರನ್ನು ರಕ್ಷಿಸಿದ ಬಜರಂಗದಳದ ನಾಲ್ವರು ಕಾರ್ಯಕರ್ತರಿಗೆ ಸಚಿವ ಜಮೀರ್‌ ಅಹಮದ್‌ ಖಾನ್ ತಲಾ 1 ಲಕ್ಷ ರೂ.ನಗದು ಬಹುಮಾನ ನೀಡಿದ್ದಾರೆ.

ಈ ಹಿಂದೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಜಮೀರ್‌ ಅವರು ಕೊಡಗಿನ ಜೋಡುಪಾಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನತೆಯನ್ನು ರಕ್ಷಿಸಿದ್ದ ತಂಡವನ್ನು ಸನ್ಮಾನಿಸಿದ್ದರು. 

ದಾನ ಶೂರ ಕರ್ಣನಾದ ಸಚಿವ ಜಮೀರ್ ಅಹ್ಮದ್

ಇದೇ ತಂಡದ 16 ಮಂದಿಯನ್ನು ಮಂಗಳೂರಿಗೆ ಗುರುವಾರ ಕರೆಸಿಕೊಂಡ ಸಚಿವರು, ಆ 16 ಮಂದಿಯಲ್ಲಿ ಬಜರಂಗದಳಕ್ಕೆ ಸೇರಿದ ನಾಲ್ವರು ಕಾರ್ಯಕರ್ತರಿಗೆ ತಲಾ 1 ಲಕ್ಷ ರೂ. ನಗದು ನೀಡಿದರು. 

ಈ ಮೊತ್ತವನ್ನು ವರ್ಷದೊಳಗೆ ಯಾವುದಾದರೂ ತೀರ್ಥಕ್ಷೇತ್ರ ಭೇಟಿಗೆ ವಿನಿಯೋಗಿಸುವಂತೆ ತಿಳಿಸಿದರು. ತಂಡದ ಇತರ 12 ಮಂದಿ ಮುಸ್ಲಿಂ ಯುವಕರಿಗೆ ಉಮ್ರಾ ಭೇಟಿಯ ವೆಚ್ಚವನ್ನು ನೀಡುವುದಾಗಿ ಜೋಡುಪಾಲ ಭೇಟಿ ವೇಳೆ ಭರವಸೆ ನೀಡಿದ್ದರು.

ಈ ವೇಳೆ ಮಾತನಾಡಿದ ಜಮೀರ್‌, ಜಲಪ್ರಳಯದ ವೇಳೆ ಮಧ್ಯಮ ವರ್ಗದ ಈ ಯುವಕರ ತಂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ನಾಗರಿಕರ ಪ್ರಾಣ ಉಳಿಸಿದ್ದಾರೆ. ಅವರಿಗೆ ಯಾವುದೇ ತಾರತಮ್ಯವಿಲ್ಲದೆ ಕೊಡುಗೆಯನ್ನು ನೀಡುತ್ತಿರುವುದಾಗಿ ಹೇಳಿದರು.

ನೀಡಿರುವ ಹಣದಲ್ಲಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ. ಪ್ರವಾಸದ ವೇಳೆ ಮೊದಲು ನಿಮ್ಮ ಕುಟುಂಬದವರಿಗಾಗಿ ಪ್ರಾರ್ಥಿಸಿ. ಜೊತೆಗೆ ರಾಜ್ಯದ ಜನತೆಗಾಗಿ ಬೇಡಿಕೊಳ್ಳಿ. ನಾಡಿನಲ್ಲಿ ಜನರು ನೆಮ್ಮದಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳುವ ವಾತಾವರಣ ನೆಲೆಸುವಂತೆಯೂ ಪ್ರಾರ್ಥಿಸಿ ಎಂದರು.