ನವದೆಹಲಿ(ಅ.11): ಗಂಗಾ ನದಿ ಶುದ್ದೀಕರಣಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಜಿ. ಡಿ. ಅಗರವಾಲ್ ಮೃತಪಟ್ಟಿದ್ದಾರೆ.

ಗಂಗಾ ನದಿ ಶುದ್ದೀಕರಣಕ್ಕೆ ಆಗ್ರಹಿಸಿ 81 ವರ್ಷದ ಅಗರವಾಲ್ ಕಳೆದ ಜೂನ್ ನಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅಗರವಾಲ್ ಅವರನ್ನು ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇಂದು ಅಗರವಾಲ್ ಅವರಿಗೆ ತೀವ್ರ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಗಂಗಾ ನದಿ ಶುದ್ಧಿಕರಣಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಅಗರವಾಲ್ ಕಳೆದ 109 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಕಾನ್ಪುರದ ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಜಿ.ಡಿ. ಅಗರವಾಲ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

109 ದಿನಗಳ ತಮ್ಮ ಉಪವಾಸ ಸತ್ಯಾಗ್ರಹದಲ್ಲಿ ಜೇನು ಬೆರೆಸಿದ ನೀರನ್ನಷ್ಟೇ ಸೇವಿಸುತ್ತಿದ್ದ ಅಗರವಾಲ್, ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನೀರನ್ನೂ ಸೇವಿಸುವುದನ್ನು ನಿಲ್ಲಿಸಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.