ಕಾಂಗ್ರೆಸ್‌ನ ಪ್ರಭಾವಿಗಳನ್ನು ಹೆದರಿಸಿ ದತ್ತು ಪಡೆಯಲು ಪ್ರಯತ್ನ: ಸಚಿವರ ಕುಲಕರ್ಣಿ ಆರೋಪ
ಧಾರವಾಡ: ಬಿಜೆಪಿಗೆ ಮಕ್ಕಳನ್ನು ಹೆರುವ ಶಕ್ತಿ ಇಲ್ಲ. ಹೀಗಾಗಿ ಕಾಂಗ್ರೆಸ್ನಿಂದ ಪ್ರಭಾವಿ ನಾಯಕರನ್ನು ದತ್ತು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯು ಬ್ಲ್ಯಾಕ್ ಮೇಲ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್’ನ ಪ್ರಭಾವಿಗಳನ್ನು ಹೆದರಿಸಲು ಐಟಿ ದಾಳಿಯ ದಾರಿ ಕಂಡುಕೊಂಡಿದೆ. ಆದರೆ, ಡಿ.ಕೆ. ಶಿವಕುಮಾರ್ ಅವರಾಗಲಿ, ಪ್ರಮೋದ್ ಮಧ್ವರಾಜ್ ಅವರಾಗಲಿ ಯಾವತ್ತೂ ಬಿಜೆಪಿ ಸೇರಲ್ಲ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತ ಧರ್ಮ ಹೋರಾಟ ನಿರಂತರ: ಪ್ರತ್ಯೇಕ ಲಿಂಗಾಯತ ಧರ್ಮ ವಿರುದ್ಧದ ಹೋರಾಟ ನಿರಂತರ. ಈ ಕುರಿತು ಸೌಹಾರ್ದ ಮಾತುಕತೆಗೆ ಪಂಚಪೀಠಾಧೀಶರಿಗೆ ಮನವಿ ಮಾಡಿದ್ದೇವೆ. ಶ್ರೀಗಳ ಬಗ್ಗೆ ನಮಗೆ ಗೌರವ ಇದೆ. ವೀರಶೈವರು, ಲಿಂಗಾಯತರು ಬೇರೆ ಬೇರೆ ಅಲ್ಲ. ನಾವು ಪ್ರತ್ಯೇಕ ಧರ್ಮ ಮಾತ್ರ ಕೇಳುತ್ತಿದ್ದೇವೆ. ಅವರು ಎಂದೂ ನಮ್ಮನ್ನು, ತಮ್ಮವರೆಂದು ಪರಿಗಣಿಸಿಲ್ಲ. ಒಂದು ವೇಳೆ ಶ್ರೀಗಳು ಮಾತುಕತೆಗೆ ಆಹ್ವಾನಿಸಿದರೆ ನಾನು ಹೋಗಲು ಸಿದ್ಧ ಎಂದು ಹೇಳಿದರು.
