ಪ್ರಧಾನಿ ನರೇಂದ್ರ ಮೋದಿ ಅವರಿಗೆ  ನಗರಾಭಿವೃದ್ಧಿ ಯುಟಿ ಖಾದರ್ ಅವರು ಪತ್ರ ಬರೆಯುವುದಾಗಿ ಹೇಳಿದ್ದಾರೆ. ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. 

 ಮಂಗಳೂರು :  ನಗರಕ್ಕೆ ಮಾಂಸ ಪೂರೈಕೆಯಾಗುವ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಸಲಹೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಿದ್ದೇನೆ. ಕೇಂದ್ರ ಸರ್ಕಾರ ಏನು ಸಲಹೆ ನೀಡುತ್ತದೋ ಅದನ್ನು ಪಾಲನೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಕೇಂದ್ರ ಸರ್ಕಾರ ಮಂಗಳೂರು ಸ್ಮಾರ್ಟ್‌ ಸಿಟಿಗೆಂದು ನೀಡಿದ್ದ ಅನುದಾನದಲ್ಲಿ .15 ಕೋಟಿಯನ್ನು ಖಾದರ್‌ ಅವರು ನಗರದ ಕಸಾಯಿಖಾನೆ ನವೀಕರಣಕ್ಕೆ ಮೀಸಲಿರಿಸಿದ್ದರ ಬಗ್ಗೆ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್‌, ಕಸಾಯಿಖಾನೆ ಅಭಿವೃದ್ಧಿ ಕುರಿತು ನಗರಾಭಿವೃದ್ಧಿ ಸಚಿವನಾಗಿ ಸಲಹೆ ನೀಡಿದ್ದೆ. ಇದು ಸ್ಮಾರ್ಟ್‌ ಸಿಟಿ ಬೋರ್ಡ್‌ ಸಭೆಯಲ್ಲಿ ಒಪ್ಪಿಗೆಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಅಂಗೀಕಾರಕ್ಕೆ ಹೋಗಿದೆ. ಆದ್ದರಿಂದ ಇನ್ನು ಮುಂದೆ ಈ ವಿಚಾರದ ಕುರಿತು ಸಮಾಜದಲ್ಲಿ ವೈಷಮ್ಯ ಬಿತ್ತರಿಸುವ ಹೇಳಿಕೆಗಳನ್ನು ಯಾರೇ ನೀಡಿದರೂ ಜನತೆ ಅದಕ್ಕೆ ಪ್ರತಿಕ್ರಿಯಿಸಬಾರದು ಎಂದು ಮನವಿ ಮಾಡಿದರು.

ಗೋಶಾಲೆಗೂ ಮನವಿ: ಇದೇವೇಳೆ ಬಿಜೆಪಿಯವರ ಬೇಡಿಕೆಯಂತೆ ಗೋಶಾಲೆ ನಿರ್ಮಾಣಕ್ಕೆ ಪ್ರಸ್ತುತ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಅವಕಾಶವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಗೋಶಾಲೆಗೆ ಅನುಮತಿ ನೀಡುವ ಬಗ್ಗೆಯೂ ಪತ್ರದಲ್ಲಿ ಕೋರಿದ್ದೇನೆ. ಕೇಂದ್ರ ಒಪ್ಪಿದರೆ ಗೋಶಾಲೆಯನ್ನೂ ನಿರ್ಮಿಸಲಾಗುವುದು ಎಂದು ಖಾದರ್‌ ಹೇಳಿದರು.