Asianet Suvarna News Asianet Suvarna News

ಮಗು ಕಳವು: ಕ್ಷಮೆ ಯಾಚಿಸಿದ ಸಚಿವರು

ರಮೇಶ್‌ಕುಮಾರ್‌ ಎದುರು ಕಣ್ಣೀರಿಟ್ಟತಂದೆ | ಸರ್ಕಾರಿ ಆಸ್ಪತ್ರೆ ಸಹವಾಸ ಸಾಕು: ತಾಯಿ

Minister Seek Apology for Baby Theft From Hospital

​​ಬೆಂಗಳೂರು (ಫೆ.05): ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಸು​ಗೂಸು ಕಳುವಾಗಿರುವುದು ನೋವಿನ ಸಂಗತಿ. ಇದಕ್ಕೆ ರಾಜ್ಯ ಸರ್ಕಾರದ ಪರವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ಜಯನಗರದ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ವೇಳೆ ಮಗು ಕಳೆದುಕೊಂಡ ತ್ಯಾಗರಾಜ್‌ ಮತ್ತು ಅವರ ಕುಟುಂಬದ ಸದಸ್ಯರು ವೇದಿಕೆ ಮುಂದೆ ಬಂದು ಮಗು ಕಳವು ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಆದಷ್ಟುಬೇಗ ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಲು ಪ್ರಯತ್ನಿಸ ಲಾಗುವುದು ಎಂದರು.

ಈ ವೇಳೆ ಮಗು ತಂದೆ ತ್ಯಾಗರಾಜ್‌ ಕಣ್ಣೀರಿಡುತ್ತಾ ಮಗು ಕಳವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಇಲ್ಲಿನ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸು​ವುದಿಲ್ಲ. ಆಸ್ಪತ್ರೆಗೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ್‌ಕುಮಾರ್‌, ಈಗಾಗಲೇ ಪೊಲೀಸರು ಸಿಸಿಟೀವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದಾರೆ ಎಂದರು.

ಇದೇ ವೇಳೆ ಹಸುಗೂಸಿನ ತಾಯಿ ಸಹನಾ ಇದ್ದ ವಾರ್ಡ್‌ಗೆ ತೆರಳಿದ ಸಚಿವರು, ಧೈರ್ಯ ಹೇಳಲು ಮುಂದಾದರು. ಈ ವೇಳೆ ಸಹನಾ ಕೂಡ ಆಸ್ಪತ್ರೆ ಸಿಬ್ಬಂದಿಯ ಕಾರ್ಯ ವೈಖರಿ ಹಾಗೂ ನಿರ್ಲಕ್ಷ್ಯದ ಬಗ್ಗೆ ದೂರು ಹೇಳಿದರು. ಸರ್ಕಾರಿ ಆಸ್ಪತ್ರೆಯ ಸಹವಾಸ ಸಾಕಾಗಿದೆ. ಇನ್ನು ಮುಂದೆ ಯಾವ ಕಾರಣಕ್ಕೂ ನಾನು ಸರ್ಕಾರಿ ಆಸ್ಪತ್ರೆಗೆ ಬರುವುದಿಲ್ಲ. ನನ್ನ ಮಗು ಹುಡುಕಿಕೊಡಿ ಎಂದು ಕಣ್ಣೀರಿಟ್ಟರು.

ತನಿಖೆ ಚುರುಕು:

ಜಯನಗರ ಸಾರ್ವಜನಿಕ ಆಸ್ಪತ್ರೆ ತೀವ್ರ ನಿಗಾ ಘಟಕದಿಂದ ನವಜಾತ ಶಿಶು ಕಳವು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದುಷ್ಕರ್ಮಿಯ ಬಂಧನಕ್ಕೆ ಪೊಲೀಸರ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರ​ಲಿಂಗಯ್ಯ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆಸ್ಪತ್ರೆಯ ಮೂವರು ದಾದಿಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ದುಷ್ಕರ್ಮಿಯು ನವಜಾತ ಶಿಶುವಿನ ಸಂಬಂಧಿಕ ಎಂದು ಹೇಳಿಕೊಂಡು ದಾದಿ ತಿಪ್ಪಮ್ಮ ಅವರಿಂದ ಶಿಶು ಪಡೆದು ಪರಾರಿಯಾಗಿದ್ದಾನೆ. ಈಗಾಗಲೇ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದು, ದುಷ್ಕರ್ಮಿಯ ಬಂಧನಕ್ಕೆ ಶೋಧ ಮುಂದುವರಿದಿದೆ ಎಂದರು. ಹುಳಿಮಾವು ಸಮೀಪದ ಅಕ್ಷಯನಗರದ ಸಹನಾ ಮತ್ತು ತ್ಯಾಗರಾಜ್‌ ದಂಪತಿಗೆ ಜನಿಸಿದ್ದ ಗಂಡು-ಹೆಣ್ಣು ಅವಳಿ ಮಕ್ಕಳ ಪೈಕಿ ಗಂಡು ಮಗುವಿಗೆ ಕಾಮಾಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಮಧ್ಯಾಹ್ನ ದುಷ್ಕರ್ಮಿಯು ಸಂಬಂಧಿಕನ ಸೋಗಿನಲ್ಲಿ ಶಿಶು ಪಡೆದು ಪರಾರಿಯಾಗಿದ್ದನು.

 

Latest Videos
Follow Us:
Download App:
  • android
  • ios