ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಬಗ್ಗೆ ಸಹೋದರ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ರಮೇಶ್ ರಾಜೀನಾಮೆಗೆ ಯಾರು ಕಾರಣ ಎಂಬುದನ್ನು ಹೇಳಿದ್ದಾರೆ.

ಬೆಂಗಳೂರು(ಜು. 03) ರಮೇಶ್ ಜಾರಕಿಹೊಳಿ ಯಾಕೆ ಅತೃಪ್ತ ರಾದರು? ಯಾಕೆ ರಾಜೀನಾಮೆಗೆ ಮುಂದಾದರು? ಅವರ ಬೇಡಿಕೆ ಏನು ಎಂಬುದು ಈಗಲೂ ನನಗೆ ಎಂಟನೇ ಅದ್ಭುತದ ತರಹ ಕಾಣಿಸುತ್ತಿದೆ ಎಂದು ರಮೇಶ್ ಸಹೋದರ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅವರ ರಾಜೀನಾಮೆ ಹಿಂದೆ ಅವರ ಮೂವರು ಅಳಿಯಂದಿರ ಕೈವಾಡ ಇರೋದು ಸ್ಪಷ್ಟವಾಗಿದೆ. ಅವರ ರಾಜೀನಾಮೆ ಇನ್ನೂ ಕನ್ಫರ್ಮ್ ಆಗಿಲ್ಲ. ಅಂಗೀಕಾರ ಆದರೆ ಗೋಕಾಕ್ ಗೆ ಲಖನ್ ಜಾರಕಿಹೊಳಿಯವರನ್ನು ಅಭ್ಯರ್ಥಿಯಾಗಿ ಮಾಡಬೇಕು ಎಂಬ ಇಚ್ಛೆ ಇದೆ ಎಂದು ಹೇಳಿದರು.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ‘ನಾಪತ್ತೆ’!

ಈ ಎಲ್ಲ ವಿಚಾರಗಳಿಗೆ ತೀರ್ಮಾನ ತೆಗೆದುಕೊಳ್ಳುವುದು ಹೈ ಕಮಾಂಡ್ ಗೆ ಬಿಟ್ಟಿದ್ದು. ರಮೇಶ್ ಜಾರಕಿಹೊಳಿ ಅತೃಪ್ತಿ ಹಾಗೂ ರಾಜೀನಾಮೆಗೆ ಬಿಜೆಪಿ ನಾಯಕರ ಕೈವಾಡ, ಒತ್ತಡ ಖಂಡಿತ ಕಾರಣವಲ್ಲ. ಅವರು ವೈಯಕ್ತಿಕ ಕಾರಣಗಳಿಗೆ ಅವರು ಹೀಗೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಸತೀಶ್ ಸ್ಪಷ್ಟಪಡಿಸುವ ಪ್ರಯತ್ನ ಮಾಡಿದರು.

ತಾವು ಬಿಜೆಪಿಯಲ್ಲಿ ಇರುವ ಕಾರಣಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ರಮೇಶ್ ನಮ್ಮ ನಡುವೆ ಕಳೆದ ಆರು ತಿಂಗಳಿನಿಂದ ಯಾವ ಸಂಪರ್ಕವೂ ಇಲ್ಲ. ನಮ್ಮ ರಾಜಕೀಯ,ವ್ಯವಹಾರ ಎಲ್ಲವೂ ಬೇರೆ ಬೇರೆ ಎಂದು ಹೇಳಿದರು.

ರಾಜಕೀಯವೇ ಬೇರೆ, ಸಂಬಂಧವೇ ಬೇರೆ ಎಂದ ಸಚಿವ ಸತೀಶ್ ಜಾರಕಿಹೊಳಿ ಪಿರಿಯಾಪಟ್ಟಣ ಶಾಸಕ ಮಹದೇವ್ ಆರೋಪ ಮಾಡಿರುವ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಹೇಳಿದರು.