ರಾಜ್ಯದ 3450 ಏಕಶಿಕ್ಷಕ ಶಾಲೆಗಳು ಶೀಘ್ರ ಬಂದ್‌

Minister’s plan to merge govt. schools draws flak from educationists, teachers
Highlights

ರಾಜ್ಯಾದ್ಯಂತ ಒಬ್ಬ ಶಿಕ್ಷಕರಿರುವ 3,450 ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ನೂತನ ಸಚಿವ ಎನ್‌.ಮಹೇಶ್‌ ತಿಳಿಸಿದ್ದಾರೆ. ಅದರೊಂದಿಗೆ, ಕಳೆದ ಸರ್ಕಾರದಲ್ಲಿ ವಿವಾದಕ್ಕೀಡಾಗಿದ್ದ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಹೊಸ ಸಮ್ಮಿಶ್ರ ಸರ್ಕಾರದಲ್ಲೂ ಚಾಲನೆ ಪಡೆದಂತಾಗಿದೆ.

ಬೆಂಗಳೂರು :  ರಾಜ್ಯಾದ್ಯಂತ ಒಬ್ಬ ಶಿಕ್ಷಕರಿರುವ 3,450 ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ನೂತನ ಸಚಿವ ಎನ್‌.ಮಹೇಶ್‌ ತಿಳಿಸಿದ್ದಾರೆ. ಅದರೊಂದಿಗೆ, ಕಳೆದ ಸರ್ಕಾರದಲ್ಲಿ ವಿವಾದಕ್ಕೀಡಾಗಿದ್ದ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಹೊಸ ಸಮ್ಮಿಶ್ರ ಸರ್ಕಾರದಲ್ಲೂ ಚಾಲನೆ ಪಡೆದಂತಾಗಿದೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌.ಮಹೇಶ್‌, ಅತಿ ಕಡಿಮೆ ವಿದ್ಯಾರ್ಥಿಗಳಿರುವ ಮತ್ತು ಒಬ್ಬನೇ ಶಿಕ್ಷಕರಿರುವ ಶಾಲೆಗಳನ್ನು ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ ವಿಲೀನಗೊಳಿಸಲಾಗುತ್ತಿದೆ. ಈ ಶಾಲೆಗಳಲ್ಲಿರುವ ಮೂಲ ಸೌಕರ್ಯಗಳನ್ನು ಬೇರೊಂದು ಶಾಲೆಗಳಿಗೆ ಬಳಸಿಕೊಳ್ಳಲಾಗುವುದು. ವಿಲೀನಗೊಂಡ ಶಾಲೆಯ ಊರುಗಳ ವಿದ್ಯಾರ್ಥಿಗಳ ಸಂಚಾರಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ತಿಳಿಸಿದರು.

ರಾಜ್ಯದಲ್ಲಿರುವ 43,712 ಸರ್ಕಾರಿ ಶಾಲೆಗಳ ಪೈಕಿ 3,372 (ಶೇ.15.89) ಕಿರಿಯ ಪ್ರಾಥಮಿಕ ಮತ್ತು 78 (ಶೇ.7.89) ಹಿರಿಯ ಪ್ರಾಥಮಿಕ ಶಾಲೆ ಸೇರಿ ಒಟ್ಟು 3,450 ಶಾಲೆಗಳಲ್ಲಿ ಒಬ್ಬ ಶಿಕ್ಷಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕೂಡ ಇಲ್ಲ. ಹೀಗಾಗಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆಯೇ ವಿನಃ ಶಾಲೆಗಳನ್ನು ಮುಚ್ಚುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 366 ಶೂನ್ಯ ದಾಖಲಾತಿ ಶಾಲೆಗಳಿವೆ. 20,749 ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗಳಲ್ಲಿ 1,16,861 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಶಾಲೆಗಳನ್ನು ಏನು ಮಾಡಬಹುದು ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟಹೆಚ್ಚಿಸಲು ಮತ್ತು ಆಂಗ್ಲಭಾಷೆ ಬೋಧನೆಗೂ ಚಿಂತಿಸಲಾಗಿದೆ ಎಂದರು.

176 ಪಬ್ಲಿಕ್‌ ಶಾಲೆಗಳ ಬಗ್ಗೆ ಕುತೂಹಲ:  ಒಂದರಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 176 ಪಬ್ಲಿಕ್‌ ಶಾಲೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳು ಹೇಗಿರುತ್ತವೆ ಎಂಬ ಬಗ್ಗೆ ಕುತೂಹಲ ಹೊಂದಿದ್ದೇನೆ. ಸದ್ಯದಲ್ಲಿಯೇ ಭೇಟಿ ನೀಡಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಬಜೆಟ್‌ ಘೋಷಣೆ ಅನುಷ್ಠಾನ:  ಹಿಂದಿನ ಸರ್ಕಾರದ ಘೋಷಣೆಯಾದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮಾತನಾಡಿದ್ದಾರೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹುಡುಗರಿಗಿಂತ ಹೆಣ್ಣುಮಕ್ಕಳೇ ಓದಿನಲ್ಲಿ ಮುಂದಿರುತ್ತಾರೆ. ಆದರೆ, ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಉಚಿತ ಶಿಕ್ಷಣ ಅನುಷ್ಠಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶೀಘ್ರವೇ ಶಿಕ್ಷಕರ ನೇಮಕ:  ಜೂ.16ರವರೆಗೆ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಹತ್ತು ಸಾವಿರ ಶಿಕ್ಷಕರ ನೇಮಕ ಆದೇಶ ಹೊರಡಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಕೂಡ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಸದ್ಯ 22 ಸಾವಿರ ಶಿಕ್ಷಕರ ಕೊರತೆ ಇದ್ದು, ಪ್ರತಿ ವರ್ಷ ನಾಲ್ಕು ಸಾವಿರದಂತೆ ನೇಮಿಸಿಕೊಳ್ಳಬೇಕಿದೆ. ಆದರೆ, ಇದೇ ವರ್ಷ ಎಂಟು ಸಾವಿರ ಶಿಕ್ಷಕರನ್ನು ನೇಮಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಒಂದು ದೇಶ- ಒಂದು ಕಾನೂನು ಇರುವಾಗ ಒಂದೇ ಶಿಕ್ಷಣ ಯಾಕಿರಬಾರದು ಎಂಬುದು ನನ್ನ ಪ್ರಶ್ನೆ. ಸಮಾನ ಶಿಕ್ಷಣ ನೀಡುವ ದೃಷ್ಟಿಕೋನದಲ್ಲಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇನೆ.

- ಎನ್‌. ಮಹೇಶ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

101 ಪೂರ್ವ ಪ್ರಾಥಮಿಕ ಶಾಲೆ ಆರಂಭ :  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಮಾಡುವ ದೃಷ್ಟಿಯಿಂದ ಪ್ರಸಕ್ತ ಸಾಲಿನಿಂದಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು 101 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುತ್ತಿದೆ.

ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತಕ್ಕೆ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಇಲ್ಲದಿರುವುದೇ ಕಾರಣ ಎಂದು ಶಿಕ್ಷಣ ತಜ್ಞರು, ಶಿಕ್ಷಕರ ಸಂಘಟನೆಗಳು ಹಾಗೂ ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗಾಗಿ ಇಲಾಖೆಯು ರಾಜ್ಯದ ವಿವಿಧೆಡೆ 101 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುತ್ತಿದೆ.

ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಪ್ರಾಯೋಗಿಕವಾಗಿ 13 ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗುತ್ತಿದೆ. ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರ (ಡಿಎಸ್‌ಇಆರ್‌ಟಿ) ಪಠ್ಯಪುಸ್ತಕಗಳನ್ನು ಸಿದ್ಧಗೊಳಿಸುತ್ತಿದೆ ಎಂದು ಹೇಳಿದರು.

ರಾಜ್ಯದ 43,712 ಸರ್ಕಾರಿ ಶಾಲೆಗಳ ಪೈಕಿ 3,372 ಕಿರಿಯ ಪ್ರಾಥಮಿಕ ಮತ್ತು 78 ಹಿರಿಯ ಪ್ರಾಥಮಿಕ ಶಾಲೆ ಸೇರಿ 3,450 ಶಾಲೆಗಳಲ್ಲಿ ತಲಾ ಒಬ್ಬ ಶಿಕ್ಷಕ ಇದ್ದಾರೆ. ಇವುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳೂ ಇಲ್ಲ. ಹೀಗಾಗಿ, ಆಯಾ ಗ್ರಾ.ಪಂ. ವ್ಯಾಪ್ತಿಯ ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆಯೇ ವಿನಃ ಶಾಲೆಗಳನ್ನು ಮುಚ್ಚುತ್ತಿಲ್ಲ.

- ಎನ್‌.ಮಹೇಶ್‌, ಶಿಕ್ಷಣ ಸಚಿವ

loader