ಯಾವುದೇ ಸಂಸ್ಕಾರವಿಲ್ಲದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲೆ ಸರಿಯಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕಿಡಿಕಾರಿದ್ದಾರೆ.

ಕೊಪ್ಪಳ: ಯಾವುದೇ ಸಂಸ್ಕಾರವಿಲ್ಲದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲೆ ಸರಿಯಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕಿಡಿಕಾರಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಶನಿವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸೇರಿ ಬಿಜೆಪಿಯವರಿಗೆ ಯಾವುದೇ ಸಂಸ್ಕಾರ ಗೊತ್ತಿಲ್ಲ. ಹಾಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಸಾಲಮನ್ನಾ ಮಾಡಿ, ಇಲ್ಲದಿದ್ದರೆ ಕಿವಿ ಹಿಂಡಿ ಕೇಳುತ್ತೇನೆ’ ಎಂದಿದ್ದ ಯಡಿಯೂರಪ್ಪ ಅವರು, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕಿವಿ ಹಿಂಡಿ ರೈತರ ಸಾಲಮನ್ನಾ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಅವರಿಗೆ ಇದ್ಯಾವುದೂ ಬೇಕಾಗಿಲ್ಲ. ಬರೀ ಭಾಷಣ ಮಾಡುವುದೇ ಅವರ ಕೆಲಸ. ಮಾತೆತ್ತಿದರೆ ಜೈಲು, ಲೂಟಿ ಎನ್ನುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ. ಇದನ್ನು ಸಹಿಸಲಾಗದೆ, ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬರೀ ಪುಢಾರಿಗಳೇ ತುಂಬಿಕೊಂಡಿದ್ದು, ಅವರಿಗೆ ಕೃಷ್ಣಾ ‘ಬಿ’ ಸ್ಕೀಂ ಗೊತ್ತೇ ಇಲ್ಲ. ವೋಟಿಗಾಗಿ ಸುಮ್ಮನೆ ಕಸರತ್ತು ನಡೆಸುತ್ತಿದ್ದಾರೆ ಎಂದು ಟೀಕಿಸಿದರು