ರಾಜ್ಯ ಇಂಧನ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಹಲವರು ಲಿಫ್ಟ್ ನಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ.
ಬೆಂಗಳೂರು, ಅ.12: ರಾಜ್ಯ ಇಂಧನ ಸಚಿವ ಎಚ್.ಡಿ. ರೇವಣ್ಣ ಹಾಗೂ ಶಾಸಕರಾದ ಸಿ.ಎನ್. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಏಳು ಮಂದಿ ಆರು ನಿಮಿಷಗಳ ಕಾಲ ಲಿಫ್ಟ್‌ನೊಳಗೆ ಸಿಲುಕಿಕೊಂಡ ಘಟನೆ ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ನಡೆದಿದೆ.
ಸಂಜೆ 5.45ಕ್ಕೆ ಪ್ರಗತಿ ಪರಿಶೀಲನಾ ಸಭೆ ಮುಗಿದ ಬಳಿಕ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಮತ್ತು ಕೆ.ಎಸ್.ಲಿಂಗೇಶ್, ಜಿಪಂ ಸಿಇಒ ಪುಟ್ಟಸ್ವಾಮಿ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹಾಗೂ ಸಚಿವರ ಆಪ್ತ ಸಹಾಯಕ ರವಿ ಲಿಫ್ಟ್‌ನಲ್ಲಿ ಕೆಳಗಿಳಿಯುತ್ತಿದ್ದರು.
ಈ ವೇಳೆ ಓವರ್ ಲೋಡ್ ಆಗಿದ್ದು, ಲಿಫ್ಟ್ ಅರ್ಧಕ್ಕೆ ನಿಂತಿದೆ. ಮೊದಲ ನೆಲಮಹಡಿಯಿಂದ 2 ಅಡಿ ಕೆಳ ಹೋಗಿ ನಿಂತಿದೆ. ನಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಲಿಫ್ಟ್ ಬಾಗಿಲನ್ನು ತೆರೆದು ಒಳಗೆ ಸಿಲುಕಿಕೊಂಡಿದ್ದ ಸಚಿವ ರೇವಣ್ಣ, ಶಾಸಕರು ಹಾಗೂ ಅಧಿಕಾರಿಗಳನ್ನು ಹೊರಕ್ಕೆ ಎಳೆದರು.
