’ಬೇರೆ ಇಲಾಖೆಯಲ್ಲಿ ತಲೆ ಹಾಕಲು ನನಗೇನು ಹುಚ್ಚಾ’?

First Published 24, Jul 2018, 11:05 AM IST
Minister H D Revanna Explanation for his interruption to other department
Highlights

-ಮುಜರಾಯಿ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಪತ್ರ ಬರೆದಿದ್ದೇನಷ್ಟೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

- ಮಾಧ್ಯಮಗಳು ಘನತೆ ಗೌರವ ಕಾಪಾಡಿಕೊಂಡು ವರದಿಗಳನ್ನು ಮಾಡಬೇಕು

-ನಾನು ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ 

ಬೆಂಗಳೂರು (ಜು. 24): ‘ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲಿ ನಾನ್ಯಾಕೆ ತಲೆ ಹಾಕಲಿ? ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲು ನನಗೇನು ಹುಚ್ಚು ಹಿಡಿದಿದೆಯೇ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡುವ ವೇಳೆ ಮುಜರಾಯಿ ಸೇರಿದಂತೆ ಇತರ ಇಲಾಖೆಗಳ ವಿಷಯದಲ್ಲಿ ತಲೆ ಹಾಕುತ್ತೀರಿ ಎಂಬ ಆರೋಪ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕೋಪದಿಂದಲೇ ಉತ್ತರಿಸಿದ ಅವರು, ಮಾಧ್ಯಮಗಳು ಘನತೆ ಗೌರವ ಕಾಪಾಡಿಕೊಂಡು ವರದಿಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

"ನಾನು ಮುಜರಾಯಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು. ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆ ವಿಚಾರದಲ್ಲಿ ಯಾವ ಕಾರಣಕ್ಕಾಗಿ ಮೂಗು ತೂರಿಸುವ ಕೆಲಸ ಮಾಡಲಿ. ನಮ್ಮ ಭಾಗದಲ್ಲಿ ಕೆಲಸವಾಗಬೇಕಿರುವ ಕಾರಣ ಮುಜರಾಯಿ ಸಚಿವರಿಗೆ ಪತ್ರವೊಂದು ಬರೆದಿದ್ದು, ಅದನ್ನೇ ಹಸ್ತಕ್ಷೇಪ ಎಂದರೆ ಹೇಗೆ" ಎಂದು ಕಿಡಿಕಾರಿದರು.

"ಮುಜರಾಯಿ ಇಲಾಖೆಗೆ  ಸಂಬಂಧಪಟ್ಟಂತೆ ಯಾವುದೇ ರೀತಿಯಲ್ಲಿಯೂ ಸಭೆ ಮಾಡಿಲ್ಲ. ಆದರೂ ಸಭೆ ನಡೆಸಲಾಗಿದೆ ಎಂದು ಬಿಂಬಿಸಲಾಗಿದೆ. ಹಾಗೆಯೇ ನನ್ನ ಮಗ ಯಾರದ್ದೋ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಬಿತ್ತರಿಸಲಾಗಿದೆ. ಒಂದು ವೇಳೆ ನನ್ನ ಮಗ ತಪ್ಪುಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಸುಳ್ಳು ವರದಿಯನ್ನು ಮಾಡಬಾರದು. ಯಾವುದೇ ಅನುಮಾನಗಳಿದ್ದರೂ ನನ್ನನ್ನು ಸಂಪರ್ಕಿಸಿದರೆ ಅದಕ್ಕೆ ಸ್ಪಷ್ಟನೆ ನೀಡಲು ಸಿದ್ಧನಿದ್ದೇನೆ" ಎಂದು
ಗರಂ ಆಗಿ ಹೇಳಿದರು.

loader