Asianet Suvarna News Asianet Suvarna News

ರೇವಣ್ಣ ಕೆಲ ವಿಷಯಗಳಲ್ಲಿ ದೇವೇಗೌಡರ ಪಡಿಯಚ್ಚು, ಇದೊಂದನ್ನ ಬಿಟ್ಟು!

ರೇವಣ್ಣ ಅಂದರೆ ಎಲ್ಲವೂ ಅತಿಯೇ. ಮಾತು, ಪ್ರೀತಿ, ಕೆಲಸ ಎಲ್ಲವೂ ಅಷ್ಟೆ | ಪತ್ರಕರ್ತರನ್ನು ಚೆನ್ನಾಗಿ ನೋಡಿಕೋ ಎಂದು ದೇವೇಗೌಡರು ಹೇಳಿದ್ದೇ ತಡ ರೇವಣ್ಣ ಪತ್ರಕರ್ತರನ್ನು ನೋಡಿಕೊಂಡಿದ್ದೇ ಕೊಂಡಿದ್ದು! 

Minister H D Revanna alike his father Deve Gowda
Author
Bengaluru, First Published Oct 9, 2018, 12:29 PM IST

ಬೆಂಗಳೂರು (ಅ. 09): ಮುಖ್ಯಮಂತ್ರಿಗಳ ಸಹೋದರ ರೇವಣ್ಣ ಸಾಹೇಬರು ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಬಳಿ ಹೋಗಲಿ, ಪಿಯೂಷ್‌ ಗೋಯಲ್ ಬಳಿ ಹೋಗಲಿ ಅಥವಾ ರಾಜನಾಥ್‌ ಸಿಂಗ್‌ ಬಳಿ ಹೋಗಲಿ ಹಾಸನ ಬಿಟ್ಟು ಬೇರೆ ಮಾತನಾಡುವುದಿಲ್ಲ.

ಹೀಗಾಗಿ ಎಲ್ಲಿ ಮಾಧ್ಯಮದವರು ಟೀಕಿಸಿ ಬರೆಯುತ್ತಾರೋ ಎಂದು ಮುಜುಗರಕ್ಕೊಳಗಾಗಿ ವಾರ್ತಾ ಇಲಾಖೆಯವರು ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಭೇಟಿಯ ಫೋಟೋ ಬಿಡುಗಡೆ ಮಾಡುತ್ತಾರೆಯೇ ಹೊರತು ಮನವಿಯ ಪ್ರತಿ ಕೊಡಲಿಕ್ಕೆ ಹೋಗುವುದಿಲ್ಲ. ಇನ್ನೊಂದು ಆಶ್ಚರ್ಯ ಎಂದರೆ ಪ್ರತಿ ಬಾರಿ ದಿಲ್ಲಿಗೆ ಬಂದಾಗ ಮುಖ್ಯಮಂತ್ರಿಗಳ ನಿಯೋಗದಲ್ಲಿ ತಂದೆ ದೇವೇಗೌಡರು ಹಾಗೂ ಸಹೋದರ ರೇವಣ್ಣ ಇರುತ್ತಾರೆಯೇ ಹೊರತು ಉಳಿದ ಸಚಿವರ ಸುಳಿವೇ ಇರೋದಿಲ್ಲ. ಬೆಂಗಳೂರಿನಲ್ಲಿ ಭೇಟಿ ಆಗಲು ಸಮಯ ಸಿಗದೇ ಇರೋದರಿಂದ 15 ದಿನಕ್ಕೊಮ್ಮೆ ದಿಲ್ಲಿಯಲ್ಲಿ ಕುಮಾರಸ್ವಾಮಿ, ದೇವೇಗೌಡ ಹಾಗೂ ರೇವಣ್ಣ ಒಟ್ಟಿಗೆ ಕುಳಿತು ಮಾತನಾಡಿಕೊಳ್ಳುತ್ತಾರೇನೋ.

ಅತಿ ರೇವಣ್ಣ - ಇತಿ ವೃತ್ತಾಂತ

ರೇವಣ್ಣ ಅಂದರೆ ಎಲ್ಲವೂ ಅತಿಯೇ. ಮಾತು, ಪ್ರೀತಿ, ಕೆಲಸ ಎಲ್ಲವೂ ಅಷ್ಟೆ. ಮೊನ್ನೆ ಎದುರಿಗೆ ಸಿಕ್ಕ ಪತ್ರಕರ್ತರನ್ನು ನೋಡಿದ ದೇವೇಗೌಡರು ಅಲ್ಲೇ ಇದ್ದ ರೇವಣ್ಣರನ್ನು ಕರೆದು ಇವರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಹೋದರು.

ತಂದೆ ಅಷ್ಟುಹೇಳಿದ್ದೇ ತಡ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ಕಾಯುತ್ತಿದ್ದ ಪತ್ರಕರ್ತರನ್ನು ಅಯ್ಯೋ ಬನ್ರಿ, ಸಿಎಂ ಅವರನ್ನು ಆಮೇಲೆ ನೋಡುವಿರಂತೆ ಎಂದು ಕರೆದ ರೇವಣ್ಣ, ಬೇಡ ಬೇಡ ಎಂದರೂ ಮುಖ್ಯಮಂತ್ರಿಗಳ ಡೈನಿಂಗ್‌ ಟೇಬಲ…ಗೆ ಕರೆದುಕೊಂಡು ಹೋದರು.

ಆದರೆ ಅಧಿಕಾರಿಗಳು ಪ್ರೋಟೋಕಾಲ್‌ ತಿಳಿಸಿ ಹೇಳಿದ ನಂತರ ಕೆಳಗಡೆ ಕರೆದುಕೊಂಡು ಹೋಗಿ ಮುದ್ದೆ ಮಾಡಿಸಿ ಊಟ ಹಾಕಿಸಿದರು. ಅದಾದ ಒಂದೆರಡು ಗಂಟೆ ನಂತರ ಮತ್ತೆ ಪತ್ರಕರ್ತರ ಹತ್ತಿರ ಬಂದು ಉಪ್ಪಿಟ್ಟು ಚುರುಮುರಿ ಬಲವಂತವಾಗಿ ತಿನ್ನಿಸಿ ಹೋದರು. ಪತ್ರಕರ್ತರು ಬಿಡಿ, ಎದುರುಗಡೆ ಕೂತಿದ್ದ ಅಧಿಕಾರಿ ಒಬ್ಬರು ಉಪ್ಪಿಟ್ಟು ಅರ್ಧ ಸಾಕು ಎಂದರೆ ರೇವಣ್ಣ ಅಯ್ಯೋ ತಗೊಳ್ರಿ, ಏನಾದ್ರೂ ಆದ್ರೆ ಡಾಕ್ಟರ್‌ ಕರೆಸೋಣ ಎಂದು ಬೆನ್ನು ಹತ್ತಿ ತಿನ್ನಿಸಿದರು.

ಈಟಿಂಗ್‌ ಬಿಡಿ, ಮೀಟಿಂಗ್‌ ವಿಷಯದಲ್ಲೂ ರೇವಣ್ಣ ಹಾಗೆಯೇ. ಬೆಳಿಗ್ಗೆ 9 ಗಂಟೆಗೆ ಹೊಸ ಕರ್ನಾಟಕ ಭವನ ಕಟ್ಟಲು ಶುರುವಾದ ಮೀಟಿಂಗ್‌ ಮುಗಿದದ್ದು ರಾತ್ರಿ 8 ಗಂಟೆಗೆ. ಅದಾದ ಮೇಲೆ ರೇವಣ್ಣ ಅವರು ಸುಸ್ತಾಗಿದ್ದ ಅಧಿಕಾರಿಗಳನ್ನು ಭವನ-2 ನೋಡಲು ಕರೆದುಕೊಂಡು ಹೋದರು. ಬೆಳಿಗ್ಗೆ 6 ಗಂಟೆಗೆ ಎದ್ದು ದಿಲ್ಲಿಯ ಮಲೈ ಮಂದಿರಕ್ಕೆ ಹೋಗಿ ಬರುವ ರೇವಣ್ಣ, ನಂತರ ರೆಸ್ಟ್‌ ತಗೊಳೋದು ರಾತ್ರಿಯೇ. ರೇವಣ್ಣ ಕೆಲ ವಿಷಯಗಳಲ್ಲಿ ದೇವೇಗೌಡರ ಪಡಿಯಚ್ಚು, ಇಂಗ್ಲಿಷ್‌ ಒಂದನ್ನು ಬಿಟ್ಟು.

- ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

Follow Us:
Download App:
  • android
  • ios