Asianet Suvarna News Asianet Suvarna News

ಸಾಧಕರ ಪಟ್ಟಿ ಬಿಡುಗಡೆ ಮಾಡಿದ ಸಚಿವ ಡಿಕೆಶಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ವಿವಿಧ ರೀತಿಯ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ‘ಬಸವ ಪುರಸ್ಕಾರ’, ಚೆನ್ನೈನ ಟಿ.ಎನ್‌.ಕೃಷ್ಣನ್‌ ‘ಟಿ.ಚೌಡಯ್ಯ ಪ್ರಶಸ್ತಿ’ ಹಾಗೂ ಗಾಂಧೀಜಿ ಅನುಯಾಯಿ ಚನ್ನಮ್ಮ ಹಳ್ಳಿಕೇರಿ ‘ಶ್ರೀ ಭಗವಾನ್‌ ಮಹಾವೀರ ಶಾಂತಿ’ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. 

Minister DK Shivakumar Release Awardees List
Author
Bengaluru, First Published Jul 12, 2019, 9:27 AM IST

ಬೆಂಗಳೂರು [ಜು.12] :  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ‘ಬಸವ ಪುರಸ್ಕಾರ’, ಚೆನ್ನೈನ ಟಿ.ಎನ್‌.ಕೃಷ್ಣನ್‌ ‘ಟಿ.ಚೌಡಯ್ಯ ಪ್ರಶಸ್ತಿ’ ಹಾಗೂ ಗಾಂಧೀಜಿ ಅನುಯಾಯಿ ಚನ್ನಮ್ಮ ಹಳ್ಳಿಕೇರಿ ‘ಶ್ರೀ ಭಗವಾನ್‌ ಮಹಾವೀರ ಶಾಂತಿ’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2018ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಲಲಿತಕಲೆ ಹಾಗೂ ಜಕಣಾಚಾರಿ ಪ್ರಶಸ್ತಿ ಸೇರಿದಂತೆ ಜಾನಪದ, ಚಿತ್ರಕಲೆ, ಸಾಹಿತ್ಯ-ಸಂಸ್ಕೃತಿ, ಸಂಗೀತ ವಿಭಾಗದ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರ ಅನುಮೋದನೆ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಗುರುವಾರ ಬಿಡುಗಡೆಗೊಳಿಸಿದ್ದಾರೆ.

ಕರ್ನಾಟಕ ಸಂಗೀತ ವಾದ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ಟಿ.ಎನ್‌.ಕೃಷ್ಣನ್‌ ಅವರಿಗೆ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾಂಧಿವಾದಿಗಳಾದ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ, ಅಹಿಂಸಾತತ್ವ ಪಾಲನೆ ಹಾಗೂ ಸಮಾಜ ಸೇವೆ ಪರಿಗಣಿಸಿ ಹಾವೇರಿಯ ಚನ್ನಮ್ಮ ಹಳ್ಳಿಕೇರಿ ಅವರನ್ನು ಭಗವಾನ್‌ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯ ಪ್ರಶಸ್ತಿ ವಿಭಾಗದಲ್ಲಿ ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಬಾಗಲಕೋಟೆಯ ಪ್ರಕಾಶ್‌ ಕಡಪಟ್ಟಿ, ‘ಜಾನಪದ ಶ್ರೀ ಪ್ರಶಸ್ತಿ’ಗೆ ಬೀದರ್‌ನ ಚಂದ್ರಶಾ ತಮ್ಮಣ್ಣಪ್ಪ ಮಾಳಗೆ (ಜನಪದ ಹಾಡು) ಹಾಗೂ ಮೈಸೂರಿನ ಹಿಣಕಲ್ ಮಹದೇವಯ್ಯ (ಮೌಖಿಕ ಕಾವ್ಯ), ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಬೆಂಗಳೂರಿನ ಸಿ.ಚಂದ್ರಶೇಖರ್‌ (ಚಿತ್ರಕಲಾ ಕ್ಷೇತ್ರ) ಹಾಗೂ ‘ಜಕಣಾಚಾರಿ ಪ್ರಶಸ್ತಿ’ಗೆ ಉಡುಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ (ಶಿಲ್ಪಕಲೆ) ಅವರನ್ನು ಆಯ್ಕೆ ಮಾಡಲಾಗಿದೆ.

ಸಾಹಿತ್ಯ-ಸಂಸ್ಕೃತಿ ವಿಭಾಗದಲ್ಲಿ ಧಾರವಾಡದ ಎಚ್‌.ಎಂ.ಬೀಳಗಿ ಅವರಿಗೆ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, ಚಿಕ್ಕಬಳ್ಳಾಪುರದ ಬಿ.ಗಂಗಾಧರಮೂರ್ತಿಗೆ ‘ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’, ಬಿಜಾಪುರದ ಎಸ್‌.ಆರ್‌.ಹಿರೇಮಠ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’, ಬೆಂಗಳೂರಿನ ದು.ಸರಸ್ವತಿ ಅವರಿಗೆ ‘ಅಕ್ಕಮಹಾದೇವಿ ಪ್ರಶಸ್ತಿ’ ಹಾಗೂ ಸಂಶೋಧಕ ಪ್ರೊ.ಷ.ಶೆಟ್ಟರ್‌ ‘ಪಂಪ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಶಾಂತಲಾ ನಾಟ್ಯ ವಿಭಾಗದ ಪ್ರಶಸ್ತಿಗೆ ಬೆಂಗಳೂರಿನ ಬಿ.ಭಾನುಮತಿ ಅವರನ್ನು ಆಯ್ಕೆಗೊಳಿಸಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಸಿರಿಗೆರೆ ರೇವಣಸಿದ್ದಶಾಸ್ತ್ರಿಗೆ ‘ಕುಮಾರವ್ಯಾಸ ಪ್ರಶಸ್ತಿ’, ಕನಕಗಿರಿ ಹುಸೇನ ಸಾಬರಿಗೆ ‘ಸಂತ ಶಿಶುನಾಳ ಷರೀಫರ ಪ್ರಶಸ್ತಿ’ ಹಾಗೂ ಧಾರವಾಡದ ಬಿ.ಎಸ್‌.ಮಠ ಅವರಿಗೆ ‘ಶ್ರೀ ನಿಜಗುಣಪುರಂದರ ಪ್ರಶಸ್ತಿ’ ಲಭಿಸಿದೆ. ರಾಷ್ಟ್ರೀಯ ಪ್ರಶಸ್ತಿಯು 10 ಲಕ್ಷ ನಗದು, ಫಲಕ ಹಾಗೂ ರಾಜ್ಯ ಪ್ರಶಸ್ತಿಗಳು 5 ಲಕ್ಷ ರು. ನಗದು ಮತ್ತು ಫಲಕ ಒಳಗೊಂಡಿವೆ.

Follow Us:
Download App:
  • android
  • ios