ಡಿಸಿ ರೋಹಿಣಿ ನನ್ನ ಮಗಳ ಸಮಾನ

First Published 12, Apr 2018, 9:06 PM IST
Minister A Manju Defend again
Highlights

ನಾನೆಂದೂ ಅವರ ವಿರುದ್ಧ ಸೇಡಿನ ನಡೆ ಅನುಸರಿಸುತ್ತಿಲ್ಲ. ಆದರೆ ಯಾರದೋ ಮಾತು ಕೇಳಿ ಅವರು ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾರೆ

ಹಾಸನ(ಏ.12): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯಾರದೋ ಕುಮ್ಮಕ್ಕಿನಿಂದ ನನ್ನ ವಿರುದ್ಧ ದುರುದ್ದೇಶದ ಕ್ರಮಕ್ಕೆ ಮುಂದಾಗಿದ್ದಾರೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿರುಗೇಟು ನೀಡಿದ್ದಾರೆ.

ಅರಕಲಗೂಡಿನಲ್ಲಿ ಮಾತನಾಡಿದ ಅವರು, ಡಿಸಿ ನನಗೆ ಮಗಳ ಸಮಾನ. ನನಗೆ ಅವರ ವಯಸ್ಸಿನ ಮಗಳಿದ್ದಾಳೆ. ನಾನೆಂದೂ ಅವರ ವಿರುದ್ಧ ಸೇಡಿನ ನಡೆ ಅನುಸರಿಸುತ್ತಿಲ್ಲ. ಆದರೆ ಯಾರದೋ ಮಾತು ಕೇಳಿ ಅವರು ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾರೆ ಎಂದರು.

ನಾನು ಸರಕಾರಿ ಪ್ರವಾಸಿ ಮಂದಿರಲ್ಲಿರುವ ನನ್ನ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ. ಅರಕಲಗೂಡು ತಾಲೂಕಿನಲ್ಲಿ ಬಗರ್ ಹುಕುಂ ಯೋಜನೆಯಡಿ ಹಕ್ಕು ಪತ್ರಗಳನ್ನು ಕಾನೂನು ಬದ್ಧವಾಗಿಯೇ ವಿತರಣೆ ಮಾಡಿದ್ದೇನೆ. ಮಾರ್ಚ್ 20 ರಂದು ಸಾಗುವಳಿ ಪತ್ರ ನೀಡಿರುವುದು ನಿಜ.ಆದರೆ ನಾನು ತಾಲೂಕು ಕಚೇರಿಯಲ್ಲಿ ಸಭೆ ಮಾಡಿಲ್ಲ. ಪ್ರವಾಸಿ ಮಂದಿರದಲ್ಲಿ ಮಾಡಿದ್ದೇನೆ.

ತಹಸೀಲ್ದಾರ್ ಕಚೇರಿಯಲ್ಲೇ ಸಭೆ ಮಾಡಬೇಕು ಎಂಬ  ನಿಯಮಾವಳಿ ಇಲ್ಲ. ಈ  ವಿಷಯದಲ್ಲಿ ನಾನು ಯಾರ ಮಾತನ್ನು ಕೇಳುವ ಅಗತ್ಯ ಇಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡರು.

ಈ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಿದ್ದೇನೆ. ನನಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂಬುದು ನನ್ನ ಆಶಯ ಎಂದರು.

ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರೋಪಕ್ಕೆ, ಅವರು ಮಾಡಿಕೊಂಡು ಬಂದಿರುವುದನ್ನು ನನಗೆ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

loader