ಬೆಂಗಳೂರು :  ರಾಜಧಾನಿಯಲ್ಲಿ ಆಟೋ ಪ್ರಯಾಣ ದರವನ್ನು ಹಾಲಿ 25ರಿಂದ 30ರುಗೆ ಹೆಚ್ಚಳ ಮಾಡು​ವಂತೆ ಆಟೋ ಸಂಘ​ಟ​ನೆ​ಗಳು ರಸ್ತೆ ಸಾರಿಗೆ ಪ್ರಾಧಿ​ಕಾ​ರಕ್ಕೆ ಮನವಿ ಮಾಡಿ​ದ್ದಾ​ರೆ.

ಈ ಸಂಬಂಧ ರಸ್ತೆ ಸಾರಿಗೆ ಪ್ರಾಧಿಕಾರ(ಆರ್‌ಟಿಎ)ಕ್ಕೆ ಮನವಿ ಮಾಡಿರುವ ಆಟೋ ಚಾಲಕರ ಸಂಘಟನೆಗಳು, ಕಳೆದ ಐದು ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ. ಈ ಅವಧಿಯಲ್ಲಿ ಎಲ್‌ಪಿಜಿ, ಬಿಡಿಭಾಗಗಳು, ಆರ್‌ಟಿಒ ಶುಲ್ಕ, ಆಯಿಲ್‌ಗಳ ದರ ಗಗನಕ್ಕೇರಿದೆ. ಆಟೋ ಚಾಲಕರು ಜೀವನ ಮಾಡುವುದೇ ಕಷ್ಟವಾಗಿದೆ. ಹಾಗಾಗಿ ದರ ಪರಿಷ್ಕರಣೆ ಮಾಡಬೇಕೆಂದು ಆರ್‌ಟಿಎ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜ​ಯ​ಶಂಕರ್‌ ಅವ​ರನ್ನು ಕೋರಿವೆ.

ಪ್ರಸ್ತುತ 1.9 ಕಿ.ಮೀ.ಗೆ ಕನಿಷ್ಠ ಪ್ರಯಾಣ ದರ 25 ಇದ್ದು, ನಂತರದ ಪ್ರತಿ ಕಿ.ಮೀ.ಗೆ 13 ದರವಿದೆ. ಈಗ ಕನಿಷ್ಠ ಪ್ರಯಾಣ ದರ​ವನ್ನು 30ಗೂ ನಂತರದ ಪ್ರತಿ ಕಿ.ಮೀ.ಗೆ 15 ರು.ಗೆ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದೇವೆ. ಕಳೆದ ತಿಂಗಳು ನಡೆದ ಆರ್‌ಟಿಎ ಸಭೆಯಲ್ಲಿ ದರ ಪರಿಷ್ಕರಣೆ ವಿಚಾರವೂ ಚರ್ಚೆಗೆ ಬಂದಿದ್ದು, ಮತ್ತೊಂದು ಸುತ್ತಿನ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಾಧಿಕಾರದ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಸಂಪತ್‌ ತಿಳಿಸಿದರು.

ದರ ಪ್ರಯಾಣ ದರ ಪರಿಷ್ಕರಣೆ ಮಾಡಲೇಬೇಕು. ಈಗಾಗಲೇ ಚಾಲಕರು ತೀವ್ರ ಸಂಕಷ್ಟಎದುರಿಸುತ್ತಿದ್ದಾರೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಆಟೋಗಳಿಗೆ ಭಾರಿ ಹೊಡೆತ ನೀಡಿವೆ. ನಗರದಲ್ಲಿ 1.50 ಲಕ್ಷ ಆಟೋ ರಿಕ್ಷಾಗಳಿದ್ದು, ಅಷ್ಟುಚಾಲಕರ ಕುಟುಂಬಗಳು ಆಟೋ ಆದಾಯ ನಂಬಿ ಬದುಕು ದೂಡುತ್ತಿವೆ. ಮೆಟ್ರೋ, ಟ್ಯಾಕ್ಸಿಗಳತ್ತ ಹೆಚ್ಚಿನ ಗ್ರಾಹಕರು ಮುಖ ಮಾಡುತ್ತಿದ್ದಾರೆ. ಹಾಗಾಗಿ ನಿತ್ಯ ಐನೂರು ರು. ದುಡಿಯುವುದು ಕಷ್ಟವಾಗಿದೆ. ಐದು ವರ್ಷಗಳಿಂದ ಆಟೋ ಪ್ರಯಾಣ ದರ ಪರಿಷ್ಕರಣೆ ಮಾಡಿಲ್ಲ. ಹಾಗಾಗಿ ಈ ಬಾರಿ ಪರಿಷ್ಕರಿಸಿ ಹೆಚ್ಚಳ ಮಾಡಬೇಕೆಂದು ಆಟೋ ಡೈವರ್‌ ಯೂನಿಯನ್‌ ಖಜಾಂಚಿ ಶ್ರೀನಿವಾಸ್‌ ಆಗ್ರಹಿಸಿದರು.