ಭೋಪಾಲ್[ಜೂ.26]: ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯಲ್ಲಿ ಟಿವಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಮಗುವೊಂದು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತಾಗಿ ಮಾಹಿತಿ ನಿಡಿರುವ ಈಸಾನ್ ಗರ್ ಪೊಲೀಸ್ ಠಾಣಾ ಅಧಿಕಾರಿ 'ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಹೇಳಿಕೆ ಪಡೆಯುತ್ತಿದ್ದೇವೆ. ತನಿಖೆ ಮುಕ್ತಾಯಗೊಂಡ ಬಳಿಕವೇ ಆತ್ಮಹತ್ಯೆಗೆ ಕಾರಣವೇನೆಂದು ತಿಳಿಯಲಿದೆ' ಎಂದಿದ್ದಾರೆ.

ಇಲ್ಲಿನ ಪನೌಟಾ ಹಳ್ಳಿಯ ಭಾಗೀರಥ್ ಅಹಿರ್ವಾರ್ ತನ್ನ ಪತ್ನಿಯೊಂದಿಗೆ ಭಾನುವಾರ ಸಂಜೆ ಮಾರುಕಟ್ಟೆಗೆ ತೆರಳಿದ್ದ. ಹೀಗಿರುವಾಗ 12 ವರ್ಷದ ಮಗಳು ಅಂಜಲಿ ತನ್ನ ತಂಗಿ ಹಾಗೂ ಗೆಳತಿಯರೊಂದಿಗೆ ಮನೆಯಲ್ಲಿ ಆಟವಾಡುತ್ತಿದ್ದಳು. ಆಟದ ನಡುವೆ ಅಂಜಲಿ ಎತ್ತರದ ಸ್ಥಳದಲ್ಲಿ ಹಗ್ಗವೊಂದನ್ನು ಕಟ್ಟಿ ಮತ್ತೊಂದು ತುದಿಯಲ್ಲಿ ಕುಣಿಕೆ ಹಾಕಿಕೊಂಡಿದ್ದಾಳೆ. ಬಳಿಕ ಕುಣಿಕೆಯವರೆಗೆ ತಲುಪಲು ಬಕೆಟ್ ಒಂದನ್ನು ಉಪಯೋಗಿಸಿದ್ದಾಳೆ. 

ಅಂಜಲಿಯೊಂದಿಗೆ ಆಡುತ್ತಿದ್ದ ಮಕ್ಕಳು ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಆಕೆ ಬಕೆಟ್ ಸಹಾಯದಿಂದ ಹತ್ತಿ. ಕುಣಿಕೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಳು. ಈ ವೇಳೆ ಬಕೆಟ್ ಜಾರಿದೆ ಹಾಗೂ ಆಯ ತಪ್ಪಿದ ಅಂಜಲಿ ಕೊರಳಿಗೆ ನೇಣು ಬಿಗಿದು ಆಕೆ ಸಾವನ್ನಪ್ಪಿದ್ದಾಳೆ' ಎಂದು ತಿಳಿಸಿದ್ದಾರೆ. 

ಸ್ಥಳೀಯರು ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಅಂಜಲಿ ಹೀಗೆ ಕುಣಿಕೆ ಹಾಕುತ್ತಿದ್ದ ವೇಳೆ ಟಿವಿಯಲ್ಲೂ ಇಂತಹುದೇ ದೃಶ್ಯ ಪ್ರಸಾರವಾಗುತ್ತಿತ್ತು. ಟಿವಿಯಲ್ಲಿ ಪ್ರಸಾರವಗುತ್ತಿದ್ದುದನ್ನು ಅನುಕರಿಸಲು ಹೋಗಿ ಆಕೆ ಸಾವನ್ನಪ್ಪಿದ್ದಾಳೆ' ಎಂದಿದ್ದಾರೆ.