Asianet Suvarna News Asianet Suvarna News

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿ ಧಾನ್ಯ

ತೆಲಂಗಾಣ ರಾಜ್ಯದ ನಂತರ ಇದೀಗ ಕರ್ನಾಟಕದಲ್ಲೂ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಉಣಬಡಿಸುವ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.

Millets In Mid Day Meal

ಬೆಂಗಳೂರು (ಜ.08): ತೆಲಂಗಾಣ ರಾಜ್ಯದ ನಂತರ ಇದೀಗ ಕರ್ನಾಟಕದಲ್ಲೂ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಉಣಬಡಿಸುವ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿರುವ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲೊಂದಾದ ಇಸ್ಕಾನ್‌ನ ‘ಅಕ್ಷಯ ಪಾತ್ರ ಫೌಂಡೇಷನ್’ ರಾಜ್ಯ ಕೃಷಿ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಕೆಲ ಸರ್ಕಾರಿ ಶಾಲೆಗಳ 1000 ಮಕ್ಕಳಿಗೆ ಸಿರಿಧಾನ್ಯ ಬಳಸಿ ತಯಾರಿಸಿದ ಬಿಸಿಯೂಟ ಪೂರೈಸಲು ಯೋಜನೆ ರೂಪಿಸಿದ್ದು, ಜ.11ರಂದು ಇದಕ್ಕೆ ಚಾಲನೆ ದೊರೆಯಲಿದೆ.

ಪ್ರಸ್ತುತ, ಬಿಸಿಯೂಟ ಯೋಜನೆಯಡಿ ನಿತ್ಯ ಅನ್ನ- ಸಾಂಬರ್, ಬಿಸಿಬೇಳೆ ಬಾತ್, ವಾರದಲ್ಲಿ ಎರಡು ದಿನ ಕೇಸರಿ ಬಾತ್, ಶಾವಿಗೆ ಪಾಯಸ (ಬುಧವಾರ ಮತ್ತು ಶುಕ್ರವಾರ) ಮತ್ತಿತರ ಆಹಾರ ನೀಡಲಾಗುತ್ತಿದೆ. ಇದೀಗ ಪ್ರಾಯೋಗಿಕ ಯೋಗ ಯೋಜನೆಯಡಿ ನಗರದ ಕೆಲ ಶಾಲೆಗಳ 1 ಸಾವಿರ ಮಕ್ಕಳಿಗೆ ಈ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡಿ ಆಹಾರ ತಯಾರಿಸಿ ಬಡಿಸಲಾಗುತ್ತದೆ. ಸುಮಾರು 6ರಿಂದ 8 ತಿಂಗಳ ಕಾಲ ಸಿರಿಧಾನ್ಯದ ಆಹಾರ ಸೇವಿಸುವ ಮಕ್ಕಳ ಬೆಳವಣಿಗೆ, ಆರೋಗ್ಯದ ಮೇಲೆ ನಿಗಾ ವಹಿಸಿ ವರದಿ ತಯಾರಿಸಲಾಗುತ್ತದೆ ಎಂದು ಅಕ್ಷಯ ಪಾತ್ರ ಫೌಂಡೇಷನ್‌ನ ಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ.

ಸಿರಿಧಾನ್ಯ ಬಳಕೆ ಹೇಗೆ?: ಹೆಚ್ಚಿನ ಪೋಷಕಾಂಶ ಇರುವ ಸಿರಿಧಾನ್ಯಗಳಾದ ನವಣೆ, ಸಜ್ಜೆ, ಆರ್ಕ, ಊದಲು, ರಾಗಿ, ಕೊರ್ಲೆ ಮುಂತಾದವುಗಳನ್ನು ಬಿಸಿಯೂಟದಲ್ಲಿ ನೀಡಲಾಗುವುದು. ಈವರೆಗೆ ಬಿಸಿಯೂಟದಲ್ಲಿ ನೀಡಲಾಗುತ್ತಿರುವ ಸಾಮಾನ್ಯ ಅಕ್ಕಿಯ ಬದಲು ವಾರದಲ್ಲಿ ಎರಡು ದಿನ ಸಾಮೆ ಅಥವಾ ಆರ್ಕದಿಂದ ಮಾಡಿದ ಅನ್ನ ಬಡಿಸುವುದು. ಸಾಂಬರ್‌ಗೂ ತರಕಾರಿ ಜತೆಗೆ ಬೇಳೆಗಳನ್ನು ಬಳಸಲಾಗುವುದು. ಸಿಹಿ ಪದಾರ್ಥ ಬದಲು ಸಿರಿಧಾನ್ಯದಿಂದ ಮಾಡಿದ ಕಾಜಾ, ಕಿಟ್ಟಿ, ಲಡ್ಡು ಮತ್ತಿತರ ಖಾದ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ವಾರಕ್ಕೆ ಒಂದೆರಡು ದಿನ ಓಕೆ : ಈ ನಡುವೆ, ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ವಿವಿಧ ಆರೋಗ್ಯ ಸಂಸ್ಥೆ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯೂಟ್ರೀಷಿಯನ್ ಸೇರಿದಂತೆ ವಿವಿಧ ಪ್ರಮುಖ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಗಳ ಸಲಹೆ ಪಡೆಯಲಾಗಿದೆ. ವೈದ್ಯರು ವಾರದಲ್ಲಿ ಒಂದೆರಡು ದಿನ ಮಾತ್ರ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸಬಹುದು ಎಂಬ ಸಲಹೆ ನೀಡಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ. ಎನ್.ಮಂಜುನಾಥ್ ಅವರು, ಸಿರಿಧಾನ್ಯಗಳಲ್ಲಿ ಹೆಚ್ಚಿನ ವಿಟಮಿನ್, ಪ್ರೊಟೀನ್ಸ್, ಮಿನರಲ್ಸ್ ಮತ್ತು ಕಬ್ಬಿಣದ ಅಂಶಗಳಿರುವುದರಿಂದ ಬಿಸಿ ಯೂಟದಲ್ಲಿ ಅವುಗಳನ್ನು ಅಲ್ಪಪ್ರಮಾಣದಲ್ಲಿ ಬಳಸಬಹುದು. ಅಂದರೆ ವಾರದಲ್ಲಿ ಒಂದು ಅಥವಾ ಎರಡು ದಿನ ನೀಡುವುದು ಒಳ್ಳೆಯದು. ಆದರೆ, ನಿತ್ಯವೂ ಸಿರಿಧಾನ್ಯಗಳ ಬಳಕೆ ಸೂಕ್ತವಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ತಿಳಿಸಿದರು.

Follow Us:
Download App:
  • android
  • ios